ಕೊಲ್ಲೂರು: ಧಾರ್ಮಿಕ ಮಹತ್ವವಿರುವ ಕೊಲ್ಲೂರಿನಿಂದ ಮುಖ್ಯ ಪೇಟೆ ಹೆಬ್ರಿ ತನಕ ಸರಕಾರಿ ಬಸ್ಸುಗಳು ಓಡಾಟ ನಿಲ್ಲಿಸಿದ್ದು, ಇದರಿಂದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿದೆ.ಈ ವರ್ಷದ ಜನವರಿ ಇಂದ ಮೇ ಮಧ್ಯಭಾಗದಲ್ಲಿ ಈ ಮಾರ್ಗದಲ್ಲಿ ಸರಕಾರಿ ಬಸ್ಸುಗಳ ಓಡಾಟವನ್ನು ನಿಲ್ಲಿಸಲಾಗಿದೆ. ಕೊಲ್ಲೂರಿನಿಂದ ಹೆಬ್ರಿಗೆ ಬೆಳಿಗ್ಗೆ 7.30 ಕ್ಕೆ ಬಿಟ್ಟರೆ ಮತ್ತೆ ಮಧ್ಯಾಹ್ನ 2.00 ಗಂಟೆ ತನಕ ಯಾವುದೇ ಬಸ್ಸು ಇರುವುದಿಲ್ಲ. ಇಲ್ಲಿ ಪ್ರತಿ ನಿತ್ಯ ಹಲವಾರು ವಿದ್ಯಾರ್ಥಿಗಳು ಶಂಕರನಾರಾಯಣ ಸರಕಾರಿ ಕಾಲೇಜಿಗೆ ತೆರಳುತ್ತಾರೆ. ಈ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಕೊಲ್ಲೂರು ,ವಂಡ್ಸೆ, ನೇರಳಕಟ್ಟೆ ,ಅಂಪಾರು, ಶಂಕರನಾರಾಯಣ, ಹಾಲಾಡಿ , ಹೆಬ್ರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವ ಖಾಸಗಿ ಬಸ್ಸುಗಳ ಓಡಾಟ ಕೂಡಾ ಕೆಲವು ದಿನಗಳಿಂದ ಸ್ಥಗಿತವಾಗಿದೆ.
ಇದರಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಕೊಲ್ಲೂರಿನಿಂದ ಶೃಂಗೇರಿಗೆ ಹೋಗುವ ಭಕ್ತಾದಿಗಳಿಗೆ ಬೆಳಿಗ್ಗೆ ಕೊಲ್ಲೂರಿನಿಂದ 7.30 ಕ್ಕೆ ಬಸ್ಸಿನ ವ್ಯವಸ್ಥೆಇರುತ್ತದೆ. ಕೆರಾಡಿ, ಚಿತ್ತೂರು, ಇಡೂರು ಗ್ರಾಮದ ಜನರಿಗೆ ಸಬ್ರಿಜಿಸ್ಟ್ರಾರ್ ಆಫೀಸುಗಳಿಗೆ ಬರಲು ಖಾಸಗಿ ಬಸ್ಸುಗಳಲ್ಲಿ ಕುಂದಾಪುರಕ್ಕೆ ಹೋಗಿ ಶಂಕರನಾರಾಯಣಕ್ಕೆ ಬರಬೇಕು. ಹಲವಾರು ವರ್ಷಗಳಿಂದ ಹನುಮಾನ್ ಸಂಸ್ಥೆಯ ಬಸ್ಸು ಉಡುಪಿ, ಬಾರ್ಕೂರು, ಮಂದಾರ್ತಿ, ಗೋಳಿಯಂಗಡಿ ,ಹಾಲಾಡಿ ,ಅಂಪಾರು ,ವಂಡ್ಸೆ, ಮಾರ್ಗವಾಗಿ ಸಂಚರಿಸುತ್ತಿದ್ದು ಈಗ ಇದ್ದಕ್ಕಿಂದಂತೆ ಸ್ಥಗಿತವಾಗಿದೆ. ಶಂಕರನಾರಾಯಣ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಕಾಲೇಜು ಗಳಿಂದ ಮನೆಗೆ ವಾಪಾಸಾಗಲು ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಈ ಕಾಲೇಜಿಗೆ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಾರೆ.
ಕೆಲವೇ ದಿನಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಯಲಿದ್ದು, ಮದ್ಯಾಹ್ನದಿಂದ ಸಂಜೆ ತನಕ ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿಯನ್ನು ವಿದ್ಯಾರ್ಥಿಗಳು ಎದುರಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಸಬ್ರಿಜಿಸ್ಟ್ರಾರ್ ಆಫೀಸಿಗೆ ಹೋಗಲು ಹಾಗೂ ಶಾಲೆ -ಕಾಲೇಜುಗಳು ಬಿಡುವ ಸಮಯದಲ್ಲಾದರೂ ಮನೆಗೆ ಹೋಗಲು ಬಸ್ಸಿನ ವ್ಯವಸ್ಥೆ ಮಾಡಿಸಿಕೊಡಬೇಕು. ಮಳೆಗಾಲದ ಸಮಯದಲ್ಲಿ ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹೋಗಲು ತೊಂದರೆ ಪಡಬೇಕಾಗುತ್ತದೆ. ವಿದ್ಯಾರ್ಥಿಗಳ ಪರೀಕ್ಷೆ ಸಮಯದಲ್ಲಾದರೂ ಬಸ್ಸಿನ ವ್ಯವಸ್ಥೆ ಮಾಡಿಸಿಕೊಡಬೇಕು. ಈ ಹಿಂದೆ ಈ ಭಾಗದ ಶಾಸಕರು ಇದರ ಬಗ್ಗೆ ಗಮನಹರಿಸಿದ್ದು, ಈಗಿನ ಶಾಸಕರೂ ವಿದ್ಯಾರ್ಥಿಗಳಿಗೆ ಸಹಾಯ ಮಾಡುವರೆಂದು ನಂಬಿಕೆ ಇದೆ ಎಂದು ಇಲ್ಲಿನ ಸ್ಥಳೀಯರಾದ ರಕ್ಷಿತ್ ಕುಮಾರ್ ವಂಡ್ಸೆ ಆಶಾಭಾವನೆ ವ್ಯಕ್ತಪಡಿಸುತ್ತಾರೆ.