ಲಾಕ್ ಡೌನ್ ಸಡಿಲಿಕೆಯಲ್ಲಿ ತಾರತಮ್ಯ ಬೇಡ, ಎಲ್ಲಾ ವ್ಯವಹಾರಕ್ಕೂಅವಕಾಶ ಕಲ್ಪಿಸಿ: ಕ್ಸೇವಿಯರ್ ಡಿಮೆಲ್ಲೋ

ಕಾರ್ಕಳ: ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಎರಡನೇ ಹಂತದ ಲಾಕ್ ಡೌನ್ ನಲ್ಲಿ ಕೊಂಚ ಮಟ್ಟದಲ್ಲಿ ಸಡಿಲಿಕೆ ಮಾಡಲಾಗಿದ್ದು ಈ ವೇಳೆ ಕೆಲವು ಕ್ಷೇತ್ರಗಳ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಕೆಲವರಿಗೆ ವ್ಯಾಪಾರಕ್ಕೆ ‌ಅವಕಾಶ ಮಾಡದೇ ಇರುವುದು ಕಂಡಾಗ ಜಿಲ್ಲಾಡಳಿತ ‌ಮಲತಾಯಿ ಧೋರಣೆ ಅನುಸರಿಸುತ್ತಿದೆಯೋ ಎಂಬ ಅನುಮಾನ‌ ಕಾಡತೊಡಗಿದೆ. ಎಲ್ಲಾ ವ್ಯವಹಾರಗಳೂ ಅಗತ್ಯವೇ ಎಂದು ಪರಿಗಣಿಸಬೇಕು ಎಂದು ತಾ.ಪಂ ಸದಸ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕ್ಸೇವಿಯರ್ ಡಿಮೆಲ್ಲೋ ಮನವಿ ಮಾಡಿದ್ದಾರೆ.

ಕೃಷಿ ಕಾರ್ಮಿಕರು ಕೃಷಿ ಉತ್ಪನ್ನಗಳನ್ನು ಸಾಗಿಸುವ ಸಂದರ್ಭದಲ್ಲಿಯೂ ಪೊಲೀಸರು ವಾಹನ ಅಡ್ಡಗಟ್ಟುತ್ತಿದ್ದಾರೆ, ಕೃಷಿಯ ಮಹತ್ವವೂ ಜಿಲ್ಲಾಡಳಿತಕ್ಕೆ ಪೊಲೀಸರಿಗೆ ಅರ್ಥವಾದಂತಿಲ್ಲ. ಕೃಷಿ ಸೇರಿದಂತೆ ಎಲ್ಲಾ ವ್ಯವಹಾರಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಾರತಮ್ಯ ಮಾಡಬಾರದು ಎಂದವರು ಹೇಳಿದ್ದಾರೆ.

ಜನರಿಗೆ ದಿನಸಿ, ತರಕಾರಿ ಮಾತ್ರ ಅಗತ್ಯವಲ್ಲ, ಎಲ್ಲವೂ ಅಗತ್ಯವೇ:

ಜಿಲ್ಲೆಯಲ್ಲಿ ನಾನಾ ವ್ಯಾಪಾರ ವಹಿವಾಟುಗಳು ನಡೆಸುವ ಮೂಲಕ ಜನರು ತಮ್ಮ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಮಳೆಗಾಲಕ್ಕೆ ಬೇಕಾಗುವ ಪರಿಕರಗಳು ಕೊಡೆ, ರೈನ್ ಕೋಟ್, ಕೃಷಿಗೆ ಸಂಬಂಧಿಸಿದ ತಾರ್ಪಾಲು, ಮಕ್ಕಳಿಗೆ ಬಟ್ಟೆ, ಹೊದಿಕೆ ಕಂಬಳಿ, ಒಳು ಉಡುಪು, ಪಾದರಕ್ಷೆ ಸೇರಿದಂತೆ‌ ಹೀಗೆ ಹಲವಾರು ವಸ್ತುಗಳ ಅಗತ್ಯತೆ ಇದೆ. ಜನರಿಗೆ ದಿನಸಿ, ತರಕಾರಿ ಮಾತ್ರ ಅಗತ್ಯವಲ್ಲ ಬೇರೆಯೂ ಅಗತ್ಯ ವಸ್ತುಗಳು ಬೇಕು.

ಅಲ್ಲದೆ ವಾಹನ ದುರಸ್ತಿಗಾಗಿ, ಆಟೋಮೊಬೈಲ್, ಗ್ಯಾರೇಜ್, ಪಂಚರ್ ಶಾಪ್, ಜೆರಾಕ್ಸ್ ,ಪುಸ್ತಕ ಅಂಗಡಿ, ಹೀಗೆ ಸಣ್ಣ ಪುಟ್ಟ ಬೀದಿ ಬದಿ ಗೂಡಂಗಡಿಗಳಿಗೆ ಮಧ್ಯಾಹ್ನ ದ ವರೆಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಇದನ್ನೇ ನಂಬಿಕೊಂಡು ದಿನ ವಹಿವಾಟು ನಡೆಸುವ ಮೂಲಕ ಅದೆಷ್ಟೋ ಕುಟುಂಬಗಳು ತಮ್ಮ ಬದುಕು‌ ಸಾಗಿಸುತ್ತಿದ್ದಾರೆ.

ಜಿಲ್ಲಾಡಳಿತದ  ಈ ದ್ವಂದ್ವ ‌ಹಾಗೂ ತಾರತಮ್ಯ ‌ನೀತಿಯ ಪರಿಣಾಮ ಅವರೆಲ್ಲಾ ಇದೀಗ ಬೀದಿಗೆ ಬರುವ ಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಅವರಿಗೂ ಎಲ್ಲರಂತೆ ಮಧ್ಯಾಹ್ನದವರೆಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು, ಜೀವಂತ ಇರುವ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಕ್ಸೇವಿಯರ್ ಡಿಮೆಲ್ಲೋ ಆಗ್ರಹಿಸಿದ್ದಾರೆ.