ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳ ತರಗತಿಗಳ ಆರಂಭದ ಬಗ್ಗೆ ಸದ್ಯ ಯಾವುದೇ ತೀರ್ಮಾನ ವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು. ಅದರ ಹೊರತಾಗಿ ಕಾಲೇಜುಗಳನ್ನು ಆರಂಭಿಸುವುದಲ್ಲ. ಕೊರೋನ ಇನ್ನೂ ಪೂರ್ಣವಾಗಿ ನಿವಾರಣೆ ಆಗದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎಂದರು.
ಇನ್ನು ರಾಜ್ಯದಲ್ಲಿ ಶೇ 65.14ರಷ್ಟು ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು. ‘ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ 4.90 ಲಕ್ಷ ವಿದ್ಯಾರ್ಥಿಗಳಿದ್ದು, ಈ ಪೈಕಿ ಈವರೆಗೆ 3.13 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 29,241 ಸಿಬ್ಬಂದಿ ಪೈಕಿ 24,875 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಈವರೆಗೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ ಶೇ 65.14ರಷ್ಟು ಗುರಿ ತಲುಪಲಾಗಿದೆ ಎಂದು ಅವರು ಮಾಹಿತಿ ನೀಡಿದರು.