ಬೆಳಗಾವಿ: ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯವಾಗಲಿದ್ದು, ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗುವುದಿಲ್ಲ. ನಿರ್ಗತಿಕರು ಹಾಗೂ ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆ ಜಾರಿ ಸ್ವಲ್ಪ ವಿಳಂಬವಾಗಬಹುದು. ಆದರೆ ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಭಾನುವಾರದಂದು ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲಮಂಟಪ ಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚುನಾವಣೆ ಸಮಯದಲ್ಲಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ರಾಜ್ಯದ ಜನ ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಿದ್ಧರಿದ್ದೇವೆ. ಆದರೆ ಪ್ರತಿಪಕ್ಷಗಳು ವಿನಾಕಾರಣ ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆ ನಡೆದಿವೆ ಎಂದರು.
ಆದಾಯ ತೆರಿಗೆ ಪಾವತಿಸುವವರಿಗೆ, ಸರ್ಕಾರಿ ನೌಕರರಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಕೆಲವರು ನಮಗೆ ಗ್ಯಾರಂಟಿ ಬೇಡ ಅಂದಿದ್ದಾರೆ. ಅಂಥವರಿಗೆ ಸರ್ಕಾರ ನಿಯಮ ಮಾಡಬೇಕು. ಬೇಡ ಅಂದವರಿಗೆ ಕಾನೂನು ತರುತ್ತೇವೆ. ಮುಂದಿನ ಸಚಿವ ಸಂಪುಟದಲ್ಲಿ ಇದರ ಸಂಪೂರ್ಣ ಮಾಹಿತಿ ಸಿಗಲಿದೆ. ಕೆಲ ಕಡೆ ಮೀಟರ್ ಇಲ್ಲದೆ ನೇರವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ಮೊದಲು ಮೀಟರ್ ಹಾಕಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಮೋದಿಯವರು .15 ಲಕ್ಷ ಕೊಡುತ್ತೇನೆ ಎಂದಿದ್ದರು. ಯಾರಾದರೂ ಚರ್ಚೆ ಮಾಡಿದರಾ? ನಾವು ಗ್ಯಾರಂಟಿ ಕೊಡಲ್ಲ ಎನ್ನಲ್ಲ. ಸುಮ್ಮನೆ ಕೊಡಲು ಆಗುವುದಿಲ್ಲ. ಇನ್ನೂ ಬಹಳ ದಿನ ಇದೆ. ಸ್ವಲ್ಪ ವಿಳಂಬ ಆಗಬಹುದು. ಆದರೆ ಖಂಡಿತವಾಗಿಯೂ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಸರ್ವೇ ಮಾಡುತ್ತಿದ್ದೇವೆ. ಸರ್ಕಾರದಲ್ಲೂ ಪಟ್ಟಿಇದೆ. ಅದನ್ನು ಹೇಗೆ ಜಾರಿಗೆ ತರಬೇಕು ಎನ್ನುವುದೇ ಪ್ರಶ್ನೆಯಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಕೇವಲ ಕರ್ನಾಟಕದ ಮಹಿಳೆಯರಿಗಷ್ಟೇ ಅನ್ವಯ ಆಗಲಿದೆಯೇ ಹೊರತು ಹೊರಗಿನವರಿಗಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವಜ್ಯೋತಿ ಬಸವೇಶ್ವರ, ಬುದ್ಧ, ಡಾ. ಅಂಬೇಡ್ಕರ ಭಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು.