ರೆಪೊ ದರದಲ್ಲಿ ಬದಲಾವಣೆ ಇಲ್ಲ, ಶೇ.5.5 ಬಡ್ಡಿದರ ಮುಂದುವರಿಕೆ; ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

                                                                                            ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿ ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಘೋಷಿಸಿದೆ. ಆರ್‌ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC) ರೆಪೊ ದರವು ಶೇಕಡಾ 5.5 ರಷ್ಟೇ ಇದ್ದು ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ. 

ಈ ಬಗ್ಗೆ ಇಂದು(ಆ.06) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಸುಂಕದ ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದರೂ ‘ತಟಸ್ಥ’ ನೀತಿ ನಿಲುವು ಮುಂದುವರೆದಿದೆ ಎಂದು ಹೇಳಿದ್ದಾರೆ.

ರೆಪೋ ದರದ ಯಥಾಸ್ಥಿತಿ ಮುಂದುವರಿಸುವುದರ ಜೊತೆಗೆ ತನ್ನ ನೀತಿ ನಿಲುವನ್ನು ತಟಸ್ಥ ಅಥವಾ ನ್ಯೂಟ್ರಲ್​ನಲ್ಲೇ ಮುಂದುವರಿಸುವ ನಿರ್ಣಯವನ್ನು ಅವರು ಘೋಷಿಸಿದ್ದಾರೆ. ಸಂಜಯ್ ಮಲ್ಹೋತ್ರಾ ಅವರು ಈ ವರ್ಷದ ಆರಂಭದಲ್ಲಿ ಆರ್​ಬಿಐ ಗವರ್ನರ್ ಆಗಿ ಆಯ್ಕೆಗೊಂಡಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ನಾಲ್ಕನೇ ಎಂಪಿಸಿ ಸಭೆ ಇದಾಗಿದೆ. ಹಿಂದಿನ ಮೂರು ಸಭೆಯಲ್ಲಿ ಸತತವಾಗಿ ಬಡ್ಡಿದರ ಇಳಿಕೆ ಮಾಡಲಾಗಿತ್ತು.

ಆರು ಸದಸ್ಯರ ಹಣಕಾಸು ಸಮಿತಿ ಆರ್ಥಿಕ ವರ್ಷ 2026ರ ಮೂರನೇ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೇ, ಶೇ. 5.5 ಅನ್ನೇ ಮುಂದುವರಿಸಲಾಗಿದೆ. ಭಾರತದ ಆಮದುಗಳ ಮೇಲೆ ಶೇ. 25ರಷ್ಟು ಅಮೆರಿಕಾದ ಸುಂಕದ ನಿರ್ಧಾರ, ಆಗಸ್ಟ್ ಏಳರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ರಷ್ಯಾ ಜೊತೆಗೆ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವ ಭಾರತದ ನಿರ್ಧಾರದಿಂದ, ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆ ರೆಪೋ ದರ ಶೇ. 5.5ರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಏನಿದು ರೆಪೋ ದರ?
ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು ರೆಪೋ ದರ ಎನ್ನಲಾಗುತ್ತೆ. ರೆಪೋ ದರ ಇಳಿಕೆಯಾದಲ್ಲಿ ಬ್ಯಾಂಕ್‌ಗಳಿಗೆ ಕಡಿಮೆ ದರದಲ್ಲಿ ಸಾಲ ಸಿಗುತ್ತದೆ. ಇದನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದರಿಂದ ಸಾಲದ ಮೇಲಿನ ಬಡ್ಡಿಗಳು ಕಡಿಮೆಯಾಗುತ್ತವೆ.