ನಿಟ್ಟೆ ತಾಂತ್ರಿಕ ಕಾಲೇಜಿನ ತಂಡದಿಂದ ಟಚ್‌ಲೆಸ್ ಟೆಂಪರೇಚರ್ ಡಿಟೆಕ್ಟರ್- ‘ಸೆಲ್ಶಿಯಸ್’ ಉಪಕರಣದ ವಿನ್ಯಾಸ

nitte collge

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮೂವರು ಸಹಪ್ರಾಧ್ಯಾಪಕರು ಒಂದು ಸರಳ ಹಾಗೂ ಅತಿ ಕಡಿಮೆ ವೆಚ್ಚದ ಟಚ್‌ಲೆಸ್ ಟೆಂಪರೇಚರ್ ಡಿಟೆಕ್ಟರ್- ‘ಸೆಲ್ಶಿಯಸ್’ ಎಂಬ ಉಪಕರಣವನ್ನು ವಿನ್ಯಾಸಗೊಳಿಸಿದ್ದಾರೆ.

ಕೋವಿಡ್-೧೯ ರ ಈ ಸಂದರ್ಭದಲ್ಲಿ ಎಲ್ಲಾ ಸಂಸ್ಥೆಗಳಲ್ಲಿ, ಅತ್ಯವಶ್ಯ ಸಭೆ ಸಮಾರಂಭಗಳಲ್ಲಿ ದೇಹದ ಉಷ್ಣಾಂಶತೆಯನ್ನು ಪರೀಕ್ಷಿಸುವುದು ಕಡ್ಡಾಯವಾಗಿದ್ದು, ಈ ಸಂದರ್ಭದಲ್ಲಿ ‘ಸೆಲ್ಶಿಯಸ್’ನಂತಹ ಒಂದು ಮಿತವ್ಯಯದ ಉಪಕರಣವು ಬಹಳಷ್ಟು ಸಹಕಾರಿಯಾಗಲಿದೆ.

ಸಿಬ್ಬಂದಿಗಳು ಉಷ್ಣಾಂಶ  ಪರೀಕ್ಷಾ ಗನ್‌ನ ಸಹಾಯದೊಂದಿಗೆ ಪರೀಕ್ಷೆ ಮಾಹಬಹುದಾದರೂ ಮಾನವ ಸಂಪರ್ಕದಿಂದ ಕೋವಿಡ್ ಹರಡುವ ಸಾಧ್ಯತೆಯಿದೆ. ಈ ಅಪಾಯವನ್ನು ದೂರವಾಗಿಸುವ ನಿಟ್ಟಿನಲ್ಲಿ ಟಚ್‌ಲೆಸ್ ಟೆಂಪರೇಚರ್ ಡಿಟೆಕ್ಟರ್‌ನ ಬಳಕೆಯು ಸುರಕ್ಷಿತ ಹಾಗೂ ಮಿತವ್ಯಯವಾಗಿದೆ. ಈ ಉಪಕರಣದಲ್ಲಿರುವ ಸೆಂಸರ್‌ನ ಸುಮಾರು ೧೦ ಸೆಂಟಿಮೀಟರ್ ದೂರದಲ್ಲಿ ನಿಮ್ಮ ಮುಖವನ್ನಿರಿಸಿದರೆ ನಿಮ್ಮ ದೇಹದ ಉಷ್ಣಾಂಶವನ್ನು ಅಲ್ಲಿರುವ ಡಿಜಿಟಲ್ ಡಿಸ್ಪ್ಲೇ ಮೂಲಕ ನೋಡಬಹುದಾಗಿದೆ.
ಈ ಉಪಕರಣವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಜೂ.29 ರಂದು ಸಂಸ್ಥೆಯ ಆವರಣದಲ್ಲಿ ಉದ್ಘಾಟಿಸಿದರು. ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕರಾದ ಸುಕೇಶ್ ರಾವ್ ಮೂಲಿಗಾರ್, ದಿಲೀಪ್ ಕುಮಾರ್ ಎಂ.ಜೆ ಹಾಗೂ ಪ್ರಜ್ವಲ್ ಹೆಗ್ಡೆ ಈ ಉಪಕರಣವನ್ನು ವಿನ್ಯಾಸಗೊಳಿಸಿರುವರು.