ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಕೂಟಕ್ಕೆ ಚಾಲನೆ

ನಿಟ್ಟೆ: ಪಠ್ಯ ವಿಷಯದಲ್ಲಿನ ಪ್ರಾವೀಣ್ಯತೆಯೊಂದಿಗೆ ದೈಹಿಕ ಸದೃಢತೆಯ ಬಗೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ಇಂದಿನ ವಿದ್ಯಾರ್ಥಿಗಳು ಆಟವಾಡಲು ಮೈದಾನವನ್ನು ಬಳಸದೆ ಕಂಪ್ಯೂಟರ್‌ನನ್ನು ಬಳಸುತ್ತಿರುವುದು ಖೇದಕರವಿಚಾರ” ಎಂದು ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಅಭಿಪ್ರಾಯಪಟ್ಟರು.

ಅವರು ಜ.೨೨ರಂದು ಎನ್.ಇ.ಟಿ ಕ್ಯಾಂಪಸ್‌ನ ಬಿ.ಸಿ.ಆಳ್ವಾ ಕ್ರೀಡಾಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ೩೪ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿನ ವಿವಿಧ ಕ್ರೀಡಾಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಹಾಸ್ಟೆಲ್ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ವಾಸವ್ಯವಿರುವುದರಿಂದ ಬೆಳಗಿನ ಸಮಯದಲ್ಲಿ ವಿವಿಧ ಬಗೆಯ ವ್ಯಾಯಾಮ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಉಪಪ್ರಾಂಶುಪಾಲ ಡಾ. ಶ್ರೀನಿವಾಸ ರಾವ್ ಬಿ.ಆರ್ ಉಪಸ್ಥಿತರಿದ್ದರು.

ಕಾರ್ಯಕ್ರದಲ್ಲಿ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕೇತರವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು ೩೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕವೃಂದ ನಡೆಸಿದ ಪಥಸಂಚಲನವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಏರೋ ಕ್ಲಬ್ ವತಿಯಿಂದ ಪ್ರಾಯೋಗಿಕ ವಿಮಾನಗಳ ಹಾರಾಟ ಪ್ರದರ್ಶನ ನಡೆಯಿತು.

ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪೂಜಾರಿ ಸ್ವಾಗತಿಸಿದರು. ಕ್ರೀಡಾಧಿಕಾರಿ ಶ್ಯಾಮ್‌ಸುಂದರ್ ವಂದಿಸಿದರು. ದೈಹಿಕ ಶಿಕ್ಷಣ ಸಲಹೆಗಾರ್ತಿ ಸೌಜನ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ರೋಶನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.