ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ

ನಿಟ್ಟೆ: ‘ಸಮಾಜದ ಏಳಿಗೆಯ ಪ್ರಕ್ರಿಯೆಯಲ್ಲಿ ನನ್ನ ಪಾತ್ರವೇನಿದೆ ಎಂಬುದನ್ನು ಪ್ರತಿಯೋರ್ವ ಮಾನವನೂ ಚಿಂತಿಸಿ ಬದುಕಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಆಶಯದಂತೆ ರಾಷ್ಟ್ರಾಭಿವೃದ್ಧಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು’ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಹೆತ್ತವರಿಗೆ ಒಳ್ಳೆಯ ಮಕ್ಕಳಾಗಿದ್ದು, ಪ್ರಾಧ್ಯಾಪಕರಿಗೆ ಉತ್ತಮ ವಿದ್ಯಾರ್ಥಿಗಳೆನಿಸಿಕೊಂಡು, ವಿವಿಧ ಬಗೆಯ ಕೌಶಲ್ಯತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಹಾಗೂ ದೇಶದ ಅಭಿವೃದ್ಧಿಗೆ ಕೆಲಸಮಾಡಬೇಕು ಎಂದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ, ಎನ್.ಎಸ್.ಎಸ್ ಘಟಕವು ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗೆಗೆ ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯೇತರ ಜ್ಞಾನವೃದ್ಧಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳು ನಿರ್ದಿಷ್ಟ ಅಂಕಗಳನ್ನು ನೀಡಲಾಗುತ್ತದೆ  ಎಂದರು.

ಎನ್.ಎಸ್.ಎಸ್ ನ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ನವ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಶೇಖರ್ ಪೂಜಾರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ ಉಪಸ್ಥಿತರಿದ್ದರು.

ನಿಟ್ಟೆ ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಡಾ.ಜನಾರ್ದನ ನಾಯಕ್ ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕದ ನಾಯಕ ಹಿತೇಂದ್ರ ಸಿಂಗ್ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಪ್ರಶಾಂತ್ ನಾಯಕ್ ವಂದಿಸಿದರು. ವಿದ್ಯಾರ್ಥಿ ಅನುರಾಗ್ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸ್ವಾತಿ ಶಣೈ ಕಾರ್ಯಕ್ರಮ ನಿರೂಪಿಸಿದರು.