ತಂತ್ರಜ್ಞಾನವೇ ಅಭಿವೃದ್ಧಿಯ ಶಕ್ತಿ: ಡಾ. ಆರ್ ಚಿದಂಬರಂ

ನಿಟ್ಟೆ: ‘ಭಾರತದಂತಹ ದೇಶದಲ್ಲಿ ಗ್ರಾಮೀಣಭಾಗಗಳ ಮೂಲಭೂತ ಅಭಿವೃದ್ಧಿ ಅತಿಮುಖ್ಯ ಪ್ರಾತ್ರ ವಹಿಸುತ್ತದೆ. ದೇಶದ ಅಭಿವೃದ್ಧಿಯ ಬಗೆಗೆ ದೂರದೃಷ್ಟಿ ಹೊಂದಿದ ನಾಯಕನಷ್ಟೇ ದೇಶವನ್ನು ಸಮರ್ಥವಾಗಿ ಮುನ್ನಡೆಸಬಹುದು’ ಎಂದು ಭಾರತ ಸರ್ಕಾರದ ಮಾಜಿ ವೈಜ್ಞಾನಿಕ ಸಲಹೆಗಾರ ಡಾ. ಆರ್ ಚಿದಂಬರಂ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೆ.೧೩ ರಂದು ಭೇಟಿ ನೀಡಿ ಕಾಲೇಜಿನ ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ‘ಟೆಕ್ನಾಲಜಿ ಈಸ್ ಪವರ್’ ಎಂಬ ವಿಷಯದ ಬಗೆಗೆ ಮಾತನಾಡಿದರು. ‘ನಮ್ಮ ಸಾಮರ್ಥ್ಯ ಬಲವಾಗಿದ್ದರೆ ಶತ್ರುಗಳು ನಮ್ಮನ್ನು ಕೆಣಕುವ ಧೈರ್ಯ ತೋರುವುದಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಬೆಳೆಯುತ್ತಿದ್ದಂತೆ ಪರಿಸರ ಸಂರಕ್ಷಣೆಯ ನಮ್ಮ ಹೊಣೆಯನ್ನು ನಾವು ಮರೆಯಬಾರದು. ಸಂಶೋಧನೆ ಹಾಗೂ ನಮ್ಮ ಬೌದ್ಧಿಕ ಸಂಪತ್ತನ್ನು ವೃದ್ಧಿಸುವುದರಿಂದ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಅನನ್ಯ ಪ್ರಗತಿಯನ್ನು ಕಾಣಬಹುದಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ.ವೈಸ್ ಚಾನ್ಸೆಲರ್ ಡಾ. ಎಂ.ಎಸ್.ಮೂಡಿತ್ತಾಯ, ವಿವಿಧ ವಿಭಾಗಗಳ ಡೀನ್, ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ| ಆರ್ ಚಿದಂಬರಂ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವೂ ನಡೆಯಿತು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಇಂಡಸ್ಟ್ರಿ ಇನ್ಸ್ಟಿಟ್ಯೂಟ್ ಕೊಲ್ಯಾಬೊರೇಶನ್‌ನ ನಿರ್ದೇಶಕ ಡಾ.ಪರಮೇಶ್ವರನ್ ವಂದಿಸಿದರು.