ಉಡುಪಿ, ಜುಲೈ 1: ನಿಟ್ಟೆ ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆಯಲ್ಲಿ ಮಲೇರಿಯಾ ವಿರೋಧಿ ದಿನಾಚರಣೆ ಜೂನ್ 29 ರಂದು ಜರುಗಿತು.
ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಮಲೇರಿಯಾ ಸೊಳ್ಳೆಗಳಿಂದ ಹರುಡುವ ರೋಗವಾಗಿರುವ ಕಾರಣ ಸೊಳ್ಳೆ ಉತ್ಪತ್ತಿಯಾಗುವ ಮೂಲಗಳನ್ನು ಕಂಡು ತಕ್ಷಣವೇ ಲಾರ್ವ ನಾಶ ಮಾಡುವಂತೆ, ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕ್ರಮ ವಹಿಸುವಂತೆ, ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಂಡು ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ ಮಾತನಾಡಿ, ಸೊಳ್ಳೆಗಳಿಂದ ಬರುವ ಕಾಯಿಲೆಗೆ ಮೂಲ ಕಾರಣ ನಾವೇ ಆಗಿರುತ್ತೇವೆ. ಅನಾವಶ್ಯಕವಾಗಿ ಶೇಖರಿಸಲ್ಪಟ್ಟ ನೀರು, ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ತೊಟ್ಟಿ, ಎಲ್ಲೆಂದರಲ್ಲಿ ಎಸೆಯಲ್ಪಟ್ಟಿರುವ ಸೀಯಾಳದ ಚಿಪ್ಪುಗಳಲ್ಲಿ ಶೇಖರಣೆಯಾದ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಹಾಗಾಗಿ ಎಲ್ಲರೂ ಆರೋಗ್ಯ ಇಲಾಖೆಯ ಸಲಹೆಯಂತೆ ಲಾರ್ವ ನಿರ್ಮೂಲನೆಗೆ ಕ್ರಮವಹಿಸುವುದರ ಮುಖಾಂತರ ಮಲೇರಿಯಾ ರೋಗ ನಿರ್ಮೂಲನೆಗೆ ಸಂಕಲ್ಪ ಮಾಡುವಂತೆ ಕರೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಮಲೇರಿಯಾ ರೋಗದ ಲಕ್ಷಣಗಳು, ಅದಕ್ಕೆ ಆರೋಗ್ಯ ಇಲಾಖೆಯಿಂದ ದೊರೆಯುವ ಸೇವೆಗಳು ಮತ್ತು ಔಷಧಿಗಳ ಬಗ್ಗೆ, ಡೆಂಗ್ಯೂ, ಚಿಕನ್ ಗುನ್ಯ, ಮೆದುಳು ಜ್ವರ, ಆನೆಕಾಲು ರೋಗದ ಬಗ್ಗೆ ಮಕ್ಕಳಿಗೆ ಹಲವಾರು ರಸಪ್ರಶ್ನೆ ಕಾರ್ಯಕ್ರಮಗಳ ಮುಖಾಂತರ ಕಾರ್ಯಕ್ರಮ ನಡೆಸಿ, ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ, ಅವುಗಳನ್ನು ಲಾರ್ವ ಹಂತದಲ್ಲಿ ನಾಶ ಪಡಿಸುವ ಬಗ್ಗೆ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸೊಳ್ಳೆಗಳಿಂದ ಹರಡುವ ಎಲ್ಲಾ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಲೇರಿಯಾ ಮಾಸಾಚರಣೆಯ ಮಹತ್ವ, ಮಲೇರಿಯಾ ನಿರ್ಮೂಲನೆಗೊಳಿಸುವಲ್ಲಿ ಮಕ್ಕಳ ಪಾತ್ರದ ಬಗ್ಗೆ ತಿಳಿಸಿ, ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ತಿಳಿಸಿದರು.
ಡಾ.ಎನ್.ಎಸ್.ಎ.ಎಮ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರವಿಂದ ಕುಮಾರ್ ಎನ್. ಮಾತನಾಡಿ, ಶಾಲಾ ಮಕ್ಕಳು ಸಮುಧಾಯದ ಸಕ್ರೀಯ ಸದಸ್ಯರಾಗಿದ್ದು, ಮಲೇರಿಯಾ ನಿರ್ಮೂಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಸಹಕರಿಸುವಂತೆ ತಿಳಿಸಿದರು.
ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಬಿತಾ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ತಾಲೂಕು ಪಂಚಾಯತ್ ಸದಸ್ಯ ಹರಿಶ್ಚಂದ್ರ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್ ಉಪಸ್ಥಿತರಿದ್ದರು.
ಗೋಪಾಲ ಶೆಟ್ಟಿ ಸ್ವಾಗತಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್.ಹೆಚ್ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ್ ರಾವ್ ವಂದಿಸಿದರು.