ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ‘ನಿಟ್ಟೆ ಎಕ್ಸ್ ಪ್ರೋ- 2024’

ನಿಟ್ಟೆ: ವಿದ್ಯಾರ್ಥಿಜೀವನದಲ್ಲಿ ವಿವಿಧ ಬಗೆಯ ಸಂಶೋಧನಾ ಪ್ರಯತ್ನಗಳನ್ನು ನಡೆಸುವುದು ಕಲಿಕಾ ಪ್ರಕ್ರಿಯೆಯ ಪ್ರಮುಖ ಅಂಗವಾಗಿದೆ. ಇಂದು ಪ್ರತಿಯೊಬ್ಬನಲ್ಲೂ ವಿಮರ್ಶಾತ್ಮಕ ಚಿಂತನೆಯ ಗುಣ ಇರಬೇಕಾದುದು ಅತಿಮುಖ್ಯ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಸಲಹೆಗಾರ ಹಾಗೂ ತ್ರಿಚಿಯ ಬಿ.ಎಚ್.ಇ.ಎಲ್ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಗೋಪೀನಾಥ್ ಎಸ್ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಹಳೆವಿದ್ಯಾರ್ಥಿ ಸಂಘ ‘ವಿನಮಿತ’ದ ಸಹಯೋಗದೊಂದಿಗೆ ಸುಮಾರು 32 ವರ್ಷಗಳಿಂದ ನಡೆಸಿಕೊಂಡು ಬಂದಿರುವ ‘ನಿಟ್ಟೆ ಎಕ್ಸ್ ಪ್ರೋ’ ಎಂಬ ಅಂತಿಮ ಬಿ.ಇ ವಿದ್ಯಾರ್ಥಿಗಳ ಪ್ರೊಜೆಕ್ಟ್ ಪ್ರದರ್ಶನ ಕಾರ್ಯಕ್ರಮವನ್ನು ಏ.12 ರಂದು ಉದ್ಘಾಟಿಸಿ ಮಾತನಾಡಿ, ಸಾಮಾನ್ಯ ಜನರಿಗೆ ಉಪಯುಕ್ತವಾಗುವಂತಹ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ದಿಗೊಳ್ಳಬೇಕು ಎಂದು ಅವರು ಹೇಳಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಇಂದು ನಾವು ಅಭಿವೃದ್ದಿ ಪಡಿಸಲು ಚಿಂತಿಸುತ್ತಿರುವ ತಂತ್ರಜ್ಞಾನವು ಕೇವಲ ಕಾಲ್ಪನಿಕ ಎಂದು ಭಾಸವಾದರೂ ಮುಂದೊಂದು ದಿನ ಪ್ರಾಮುಖ್ಯತೆ ಪಡೆದುಕೊಳ್ಳುವ ಪ್ರಾಜೆಕ್ಟ್ ಆಗಿ ಹೊರಹೊಮ್ಮಬಹುದಾಗಿದೆ. ಹೀಗಾಗಿ ನಮ್ಮ ಐಡಿಯಾಗಳನ್ನು ಕಾರ್ಯರೂಪಕ್ಕೆ ತರುವ ಚಿಂತನೆಗಳು ಅಗತ್ಯ ಎನ್ನುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಎಕ್ಸ್ ಪ್ರೋ ಆಬ್ಸ್ಟ್ರ್ಯಾಕ್ಟ್ ವಾಲ್ಯೂಮ್-22 ಅನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಐ. ಆರ್ ಮಿತ್ತಂತಾಯ ಉಪಸ್ಥಿತರಿದ್ದರು.


ಎಕ್ಸ್ಪ್ರೋ ಸಂಯೋಜಕ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಿಕಪ್ಪಾ ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗದ ಸಹಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಹರ್ಷಿತಾ ಜತ್ತನ್ನ ಕಾರ್ಯಕ್ರಮ ನಿರೂಪಿಸಿದರು.


ಈ ಪ್ರಾಜೆಕ್ಟ್ ಪ್ರದರ್ಶನದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ವಿವಿಧ ಇಂಜಿನಿಯರಿಂಗ್ ವಿಭಾಗದ ಒಟ್ಟು 305 ಪ್ರಾಜೆಕ್ಟ್ ಗಳು ಪ್ರದರ್ಶನಗೊಂಡವು.