ನಿಟ್ಟೆ: ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿ ಮೇಲೆ ಮಗುಚಿಬಿದ್ದ ಮೊಟ್ಟೆ ಸಾಗಾಟದ ಲಾರಿ

ಉಡುಪಿ: ದಾವಣಗೆರೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮೊಟ್ಟೆ ಸಾಗಾಟದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದು ಬಳಿಕ ಪಾದಚಾರಿಯ ಮೇಲೆ ಮಗುಚಿಬಿದ್ದ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಅತಿ ವೇಗವಾಗಿ ಬಂದ ಲಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ.

​ಅದೇ ಸಮಯದಲ್ಲಿ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಲಾರಿ ಮಗುಚಿಬಿದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

​ಅಪಾರ ಪ್ರಮಾಣದ ಮೊಟ್ಟೆ ನಾಶ:
ಅಪಘಾತದ ಭೀಕರತೆ ಲಾರಿಯಲ್ಲಿದ್ದ ಸಾವಿರಾರು ಮೊಟ್ಟೆಗಳು ರಸ್ತೆಯುದ್ದಕ್ಕೂ ಬಿದ್ದು ಒಡೆದು ಹೋಗಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಟ್ಟೆಗಳು ನಷ್ಟವಾಗಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.