ನಿಟ್ಟೆಯಲ್ಲಿ ವಿಭಾಗ ಸಂಘಗಳ ಹಾಗೂ ವಿದ್ಯಾರ್ಥಿ ಚಟುವಟಿಕೆಗಳ ಉದ್ಘಾಟನೆ

ಕಾರ್ಕಳ: ಪ್ರತಿಯೊಂದು ಕ್ಷೇತ್ರದಲ್ಲೂ ಸವಾಲುಗಳು ಎದುರಾಗುವುದು ಸಹಜ. ಈ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಬಗೆಗೆ ಚಿಂತಿಸಬೇಕಷ್ಟೇ ಹೊರತು ಸವಾಲಿಗೆ ಅಂಜಿ ಹಿಂದೆ ಸರಿಯುವ ಪ್ರವೃತ್ತಿ ನಮ್ಮದಾಗಬಾರದು” ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಅಭಿಪ್ರಾಯಪಟ್ಟರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ.೨೪ ರಂದು ನಡೆದ ೨೦೧೯-೨೦೨೦ ನೇ ಸಾಲಿನ ವಿಭಾಗ ಸಂಘ ಹಾಗೂ ವಿದ್ಯಾರ್ಥಿ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. “ವಿಫುಲ ಉದ್ಯೋಗಾವಕಾಶಗಳ ಬಗೆಗೆ ಚಿಂತಿಸಿ ಇಂಜಿನಿಯರಿಂಗ್ ಶಿಕ್ಷಣವನ್ನು ಕೈಗೆತ್ತಿಕೊಳ್ಳುವ ವಿದ್ಯಾರ್ಥಿಗಳು ಉದ್ಯೋಗಕ್ಕೆ ಬೇಕಾದ ಪ್ರಾಯೋಗಿಕ ಜ್ಞಾನವನ್ನು ವೃದ್ಧಿಸುವುದು ಅತಿಮುಖ್ಯ” ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ಪ್ರಸ್ತುತ ಸಮಾಜದಲ್ಲಿ ನಿರಂತರ ಕಲಿಕೆಗೆ ಅತ್ಯಂತ ಮಹತ್ವ ಕಾಣಬಹುದಾಗಿದೆ. ಈ ವಿದ್ಯಾರ್ಥಿ ಸಂಘಗಳಿಂದ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಕಲಿಯಬಹುದಾದ್ದು ಬಹಳಷ್ಟಿದೆ. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳಿಗೆ ಬ್ಯಾಜ್ ವಿತರಿಸಲಾಯಿತು. ಉಪಪ್ರಾಂಶುಪಾಲ  ಹಾಗೂ ಪರೀಕ್ಷಾಧಿಕಾರಿ ಡಾ.ಶ್ರೀನಿವಾಸ ರಾವ್ ಬಿ.ಆರ್ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ಎಲ್ಲಾ ವಿಭಾಗಗಳ ಮುಖ್ಯಸ್ಥರು  ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಐ.ಆರ್.ಮಿತ್ತಂತಾಯ ಸ್ವಾಗತಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ವಿದ್ಯಾರ್ಥಿನಿಯರಾದ ಅಕ್ಷತಾ ಭಟ್, ಕೃಪಾ ರಾವ್ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ತುಷಾರ್ ಹಾಗೂ ಕೃತ್ತಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ಅನಂತರ ವಿವಿಧ ವಿದ್ಯಾರ್ಥಿ ಸಾಂಸ್ಕೃತಿಕ ಸಂಘಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.