ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ: ಅಮಿತ್ ಶಾ

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಹಾರದಲ್ಲಿ ಮತ್ತೊಮ್ಮೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ ಸಿಗಲಿದೆ. ನಿತೀಶ್ ಕುಮಾರ್ ಅವರೇ ಬಿಹಾರದ ಮುಂದಿನ ಮುಖ್ಯಮಂತ್ರಿ. ಈ ಬಗ್ಗೆ ನಾವು ಸಾರ್ವಜನಿಕವಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಶನಿವಾರ ಸುದ್ದಿ ವಾಹಿನಿಯೊಂದರಲ್ಲಿ ಸಂದರ್ಶನದಲ್ಲಿ ಬಿಜೆಪಿ ಬಿಹಾರದಲ್ಲಿ ಮುಖ್ಯಮಂತ್ರಿ ಪದವಿಗೆ ಬೇಡಿಕೆ ಇಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು. ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಬಿಜೆಪಿಗೆ ಹೆಚ್ಚಿನ ಸೀಟು ಬಂದರು ಕೂಡ ನಿತೀಶ್ ಅವರೇ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಶಾ ಸ್ಪಷ್ಟನೆ ನೀಡಿದ್ದಾರೆ.

ಬಿಹಾರದಲ್ಲಿ ಆಡಳಿತಾರೂಢ ಪಕ್ಷದಿಂದ ಲೋಕ ಜನಶಕ್ತಿ ಪಕ್ಷ ಮೈತ್ರಿ ಮುರಿದುಕೊಂಡಿರುವ ಬಗ್ಗೆ ಮಾತನಾಡಿದ ಶಾ, ಪಕ್ಷಕ್ಕೆ ಸಾಕಷ್ಟು ಸೀಟುಗಳನ್ನು ನೀಡುವುದಾಗಿ ಹೇಳಲಾಗಿತ್ತಾದರೂ ಮೈತ್ರಿ ಕಡಿದುಕೊಂಡು ಹೋಗಿದೆ, ಇದು ಅವರ(ಎಲ್ ಜೆಪಿ) ತೀರ್ಮಾನ, ನಮ್ಮದಲ್ಲ ಎಂದರು.