ರಸ್ತೆ ಸುರಕ್ಷತೆಗೆ ಉತ್ತೇಜನ: ವಾಹನಗಳಿಗೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆ ಘೋಷಿಸಿದ ನಿತಿನ್ ಗಡ್ಕರಿ

ನವದೆಹಲಿ: ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ – ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ ಎನ್‌ಸಿಎಪಿ), ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತದಲ್ಲಿನ ಆಟೋಮೊಬೈಲ್‌ಗಳಿಗೆ ‘ಸ್ಟಾರ್ ರೇಟಿಂಗ್‌’ಗಳನ್ನು ನೀಡಲಾಗುವ ಕಾರ್ಯವಿಧಾನವನ್ನು ಪ್ರಸ್ತಾಪಿಸುತ್ತದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳಲ್ಲಿ, ಭಾರತ್ ಎನ್‌ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರು ಸ್ಟಾರ್ ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಇದು ಅನುಮತಿಸುತ್ತದೆ ಮತ್ತು ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿ ಮೂಲ ಉಪಕರಣ ತಯಾರಕರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.

“ನಾನು ಈಗ ಭಾರತ್ ಎನ್‌ಸಿಎಪಿ (ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಅನ್ನು ಪರಿಚಯಿಸಲು ಕರಡು ಜಿಎಸ್‌ಆರ್ ಅಧಿಸೂಚನೆಯನ್ನು ಅನುಮೋದಿಸಿದ್ದೇನೆ, ಇದರಲ್ಲಿ ಭಾರತದಲ್ಲಿನ ಆಟೋಮೊಬೈಲ್‌ಗಳ ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್‌ಗಳನ್ನು ನೀಡಲಾಗುವುದು” ಎಂದು ಗಡ್ಕರಿ ಹೇಳಿದ್ದಾರೆ.