ಜೆಸಿಬಿ ಮುಂದೆ ನಿತ್ಯಾನಂದ ಒಳಕಾಡು ಘರ್ಜನೆ- ಕಾಂಕ್ರೀಟ್ ರಸ್ತೆ ಅಗೆಯುವ ಪ್ರಕ್ರಿಯೆ ಸ್ಥಗಿತ

ಶಾರದ ಮಂಟಪದಿಂದ ಬೀಡಿನ ಗುಡ್ಡೆ ರಸ್ತೆ ಸುಸ್ಥಿತಿಯಲ್ಲಿದ್ದರೂ ಅದನ್ನು ಅಗೆದು ಕಾಂಕ್ರೀಟೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ವಾಹನ ಸಂಚಾರಕ್ಕೆ ಸದೃಢವಾಗಿರುವ ರಸ್ತೆಯನ್ನು ಅಗೆದು ಮರು ಕಾಂಕ್ರೀಟೀಕರಣ ಮಾಡುವುದು ಸರಿಯಲ್ಲ ಎಂದು ನಗರ ಸಭೆ ಮಾಜಿ ಸದಸ್ಯ ನಿತ್ಯಾನಂದ ವಳಕಾಡು ಜೆಸಿಬಿಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ಮಾಡಿದರು.

ಸ್ಥಳೀಯ ನಗರಸಭೆ ಸದಸ್ಯ ಗಿರೀಶ್ ಅಂಚನ್, ಬಿಜೆಪಿ ಸದಸ್ಯರ ನಡುವೆ ನಿತ್ಯಾನಂದ ವಳಕಾಡು ನಡುವೆ ಕೆಲಕಾಲ ವಾದ ಪ್ರತಿವಾದ ನಡೆಯಿತು. ಐದು ದಿನಗಳಿಂದ ಕಾಂಕ್ರೀಟ್ ರಸ್ತೆಯನ್ನು ಅಗೆಯುತ್ತಿದ್ದು ನಿತ್ಯಾನಂದ ಒಳಕಾಡು ಎರಡು ದಿನದ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ನಗರ ಸಭೆಯ ಅಧಿಕಾರಿಗಳನ್ನು ಈ ಕುರಿತಾಗಿ ಗಮನ ಸೆಳೆಯಲಾಗಿತ್ತು. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಇದೊಂದು ದುಂದು ಹೆಚ್ಚಿದ ಕಾಮಗಾರಿ ಎಂಬುದು ನಿತ್ಯಾನಂದ ಒಳಕಾಡು ಆಕ್ಷೇಪ. 27 ವರ್ಷಗಳ ಹಿಂದಿನ ಕಾಂಕ್ರೀಟ್ ರಸ್ತೆ ಗುಣಮಟ್ಟ ಕಳೆದುಕೊಂಡಿದೆ. ಹೆದ್ದಾರಿಯಿಂದ ಶಾರದ ಮಂಟಪವರೆಗೆ ಈಗಾಗಲೇ ಹೊಸ ರಸ್ತೆ ನಿರ್ಮಾಣವಾಗಿದೆ. ಒಳಚರಂಡಿ ನಿರ್ಮಾಣ ಮಾಡುವ ಸಂದರ್ಭ ಅಲ್ಲಳಿ ರಸ್ತೆ ಹಾಳಾಗಿದ್ದು ಹೊಸ ರಸ್ತೆ ನಿರ್ಮಾಣ ಆಗಬೇಕಾಗಿದೆ ಎಂಬುದು ನಗರಸಭಾ ಸದಸ್ಯ ಗಿರೀಶ್ ಅಂಚನ್ ವಾದ. ಇಷ್ಟಾಗುತ್ತಲೇ ಸ್ಥಳೀಯರು ಪ್ರತಿಭಟನ ಸ್ಥಳಕ್ಕೆ ಬಂದಿದ್ದು ಹೊಸ ರಸ್ತೆಯನ್ನು ನಮಗೆ ನಿರ್ಮಾಣ ಮಾಡಿಕೊಡಿ ಹಳೆಯ ರಸ್ತೆ ಮತ್ತು ಹೊಸ ರಸ್ತೆ ಅಗಲ ಎತ್ತರ ವ್ಯತ್ಯಾಸ ಬರುತ್ತದೆ. ಮುಂದೆ ಮಳೆಗಾಲದಲ್ಲಿ ಹೊಂಡ ಬೀಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಹೇಳಿದ್ದಾರೆ.

ಈ ಬಗ್ಗೆ ನಿತ್ಯಾನಂದ ಒಳಕಾಡು ನಗರಸಭೆ ಕಮಿಷನರ್ ಗಮನ ಸೆಳೆದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಸದ್ಯಕ್ಕೆ ಕಾಂಕ್ರೀಟ್ ರಸ್ತೆ ಅಗೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.