ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಡುಪಿ ಉದ್ಯಾವರದ ಜಯಲಕ್ಷ್ಮಿ ಟೆಕ್ಸ್ ಟೈಲ್ ನಲ್ಲಿ ನರೇಂದ್ರ ಮೋದಿ ಚಿತ್ರವುಳ್ಳ ಸೀರೆಗಳನ್ನು, ಟೋಕನ್ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿರುವ ಕುರಿತ ಖಚಿತ ದೂರು ಬಂದ ಹಿನ್ನಲೆಯಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಮದ್ಯಾಹ್ನ 4 ಗಂಟೆಯ ವೇಳೆಗೆ ಕಾಪು ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಆದರೆ ಅಂಗಡಿ ಮಾಲೀಕರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿ ಸಿಬ್ಬಂದಿಗಳನ್ನು ಅಧಿಕಾರಿಗಳ ಸುತ್ತ ನಿಲ್ಲಿಸಿ ತಪಾಸಣೆ ನಡೆಸದಂತೆ ಅಡ್ಡಿಪಡಿಸಿದ್ದಾರೆ. ಬಳಿಕ, ಹೆಚ್ಚಿನ ಪೊಲೀಸ್ ಭದ್ರತೆ ತರಿಸಿ ಮಧ್ಯರಾತ್ರಿವರೆಗೂ ಅಂಗಡಿಯನ್ನು ತಪಾಸಣೆ ಮಾಡಲಾಗಿದ್ದು, ಈ ವೇಳೆಯಲ್ಲಿ ಮೋದಿ ಚಿತ್ರವುಳ್ಳ ಸೀರೆಗಳು ಪತ್ತೆಯಾಗಿದೆ. ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಜಯಲಕ್ಷ್ಮೀ ಟೆಕ್ಸ್ ಟೈಲ್ ಮಾಲೀಕರಾದ ವೀರೇಂದ್ರ ಮತ್ತು ರವೀಂದ್ರ ಅವರ ವಿರುದ್ದ, ಚುನಾವಣಾ ಕರ್ತವ್ಯಕ್ಕೆ ಅಡ್ಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಪು ಕ್ಷೇತ್ರದ ಎಂಸಿಸಿ ಅಧಿಕಾರಿ ಅನಿತಾ ಭಾಸ್ಕರ್, ತಪಾಸಣಾ ತಂಡದ ಅಧಿಕಾರಿ ನಾಗರಾಜ್ ಅವರನ್ನು ಒಳಗೊಂಡ ತಂಡ ಈ ದಾಳಿ ನಡೆಸಿದೆ.