ಉಡುಪಿ: ಜಿಲ್ಲೆಯ ಪ್ರಸಿದ್ದ ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸೆ. 29ರಂದು ಭೋಜನ ಶಾಲೆ ಉದ್ಘಾಟನೆ ಮತ್ತು ಸಮಗ್ರ ಜೀರ್ಣೋದಾರಕ್ಕೆ ದಾರು ಹಾಗೂ ಶಿಲಾ ಮುಹೂರ್ತ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜನಪ್ರತಿನಿಧಿಗಳು, ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಶರನವರಾತ್ರಿ ಮಹೋತ್ಸವ:
ಶ್ರೀ ಕ್ಷೇತ್ರದಲ್ಲಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 8 ರವರೆಗೆ ಶರನವರಾತ್ರಿ ಮಹೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಗಳು ಪ್ರತಿನಿತ್ಯ ದುರ್ಗಾ ಹೋಮ ಭಜನೆ ನಡೆಯಲಿದೆ. ಅಕ್ಟೋಬರ್ 8ರಂದು ಚಂಡಿಕಾಯಾಗ, ಸಾಮೂಹಿಕ ದೀಪ ನಮಸ್ಕಾರ ಜರಗಲಿದೆ.
ಕಾರಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಿರುವ ನೀಲಾವರ ದೇವಸ್ಥಾನ ಪೂರ್ಣ ಜೀರ್ಣೋದ್ಧಾರದ ಹಂತದಲ್ಲಿದೆ. ಶಿಲಾ ಶಾಸನಗಳ ಪ್ರಕಾರ ಸುಮಾರು 6 ಶತಮಾನಗಳ ಹಿಂದೆ ಜೀರ್ಣೋದ್ದಾರ ಗೊಂಡಿರುವ ಉಲ್ಲೇಖವಿದೆ. ಸದ್ಯ 15 ಕೋಟಿ ರೂಪಾಯಿ ಅಧಿಕ ಮೊತ್ತದ ಜೀರ್ಣೋದ್ಧಾರ ಕಾರ್ಯಕ್ಕೆ ಶರನ್ನವರಾತ್ರಿಯ ಪ್ರಾರಂಭದ ದಿನ ಚಾಲನೆ ದೊರೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.