ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಪ್ಯೂ ಪರಿಹಾರವಲ್ಲ: ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಬೇಡಿ; ತಮ್ಮ ಸರ್ಕಾರದ ವಿರುದ್ಧವೇ ಶಾಸಕ ರಘುಪತಿ ಭಟ್ ಗುಡುಗು

ಉಡುಪಿ: ಉಡುಪಿ ನಗರಕ್ಕೆ ನೈಟ್ ಕರ್ಪ್ಯೂ ವಿನ ಅಗತ್ಯ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಇದು ಪರಿಹಾರ ಕೂಡ ಅಲ್ಲ. ಹೀಗಾಗಿ‌ ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಬೇಡಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಅವರು ತಮ್ಮ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ದೇವಸ್ಥಾನ, ದೈವಸ್ಥಾನಗಳು ಹೆಚ್ಚಿರುವ ಜಿಲ್ಲೆಯಾಗಿದೆ. ಹಾಗಾಗಿ ಈ ಸಮಯದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದಕ್ಕೆ ತಡೆಯೊಡ್ಡಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಬೇಡಿ ಎಂದು ಸರ್ಕಾರದ ಬಳಿ ವಿನಂತಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ನೇಮೋತ್ಸವ, ಕೋಲ ಮೊದಲಾದ ಸಾಕಷ್ಟು ಕಾರ್ಯಕ್ರಮಗಳು ನಿಗದಿಯಾಗಿದೆ. ಹಿಂದುಳಿದ ಜನಾಂಗದವರಲ್ಲಿ ಬಹುತೇಕರು ಈ ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಬಡವರ ಬದುಕಿಗೆ ಕಲ್ಲು ಹಾಕಬೇಡಿ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದಾರೆ.

ಕೋವಿಡ್ ನಿಯಮಾವಳಿಗಳನ್ನು ರೂಪಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ. ಅದರಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆಯನ್ನು ನಿಗದಿಪಡಿಸಿ. ಈಗಾಗಲೇ ನಾವು ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ಕೊಟ್ಟಿದ್ದೇವೆ. ಹಾಗಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಸರಿಯಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಧಾರ್ಮಿಕ ಕಾರ್ಯಕ್ರಮಗಳು ಅತ್ಯಗತ್ಯ. ಆದ್ದರಿಂದ ಜನಸಂದಣಿಗೆ ನಿಯಂತ್ರಣ ಹೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ ಎಂದು ಅವರು ಆಗ್ರಹಿಸಿದ್ದಾರೆ.