19,400ಕ್ಕೆ ತಲುಪಿದ ನಿಫ್ಟಿ, ಬಿಎಸ್​ಇ ಸೆನ್ಸೆಕ್ಸ್​ 556 ಅಂಕ ಏರಿಕೆ

ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಗಮನಾರ್ಹ ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಬಿಎಸ್‌ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 555.75 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಏರಿಕೆ ಕಂಡು 65,387.16 ಕ್ಕೆ ತಲುಪಿದ್ದರೆ, ವಿಶಾಲ ಎನ್‌ಎಸ್‌ಇ ನಿಫ್ಟಿ-50 181.50 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆ ಕಂಡು 19,400 ಕ್ಕೆ ತಲುಪಿದೆ. ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ.

ಎನ್​ಟಿಪಿಸಿ, ಜೆಎಸ್​ಡಬ್ಲ್ಯೂ ಸ್ಟೀಲ್, ಜಿಯೋ ಫೈನಾನ್ಷಿಯಲ್, ಒಎನ್​ಜಿಸಿ, ಟಾಟಾ ಸ್ಟೀಲ್, ಪವರ್ ಗ್ರಿಡ್, ಕೋಲ್ ಇಂಡಿಯಾ, ಹಿಂಡಾಲ್ಕೊ, ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ ಮತ್ತು ಯುಪಿಎಲ್ ಷೇರುಗಳು ಏರಿಕೆ ಕಂಡವು.
ಮಾರುತಿ ಸುಜುಕಿ ಆಗಸ್ಟ್​ನಲ್ಲಿ ತನ್ನ ಅತ್ಯಧಿಕ ಮಾಸಿಕ ಸಗಟು ಮಾರಾಟ ವರದಿ ಮಾಡಿದ ನಂತರ ಕಂಪನಿಯ ಷೇರು ಬಿಎಸ್‌ಇಯಲ್ಲಿ ಶೇಕಡಾ 3 ರಷ್ಟು ಏರಿಕೆಯಾಗಿ 10,332 ರೂ.ಗೆ ತಲುಪಿದೆ. ಇಂಟ್ರಾ-ಡೇ ವಹಿವಾಟಿನಲ್ಲಿ, ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ ತಲಾ 10,390 ರೂ ಮತ್ತು ಎನ್‌ಎಸ್‌ಇಯಲ್ಲಿ ತಲಾ 10,397.95 ರೂ.ಗೆ ತಲುಪಿದ್ದವು.

ವಲಯವಾರು ನೋಡುವುದಾದರೆ ನಿಫ್ಟಿ ಮೆಟಲ್ ಶೇ 2.88, ನಿಫ್ಟಿ ಆಟೋ ಶೇ 1.65, ಪಿಎಸ್ಬಿ ಸೂಚ್ಯಂಕ ಶೇ 1.60, ನಿಫ್ಟಿ ಆಯಿಲ್ ಮತ್ತು ಗ್ಯಾಸ್ ಶೇ 1.56, ಐಟಿ ಸೂಚ್ಯಂಕ ಶೇ 1.12 ಮತ್ತು ನಿಫ್ಟಿ ಪ್ರೈವೇಟ್ ಬ್ಯಾಂಕ್ ಶೇ 0.96ರಷ್ಟು ಏರಿಕೆ ಕಂಡಿವೆ. ನಿಫ್ಟಿ ಸ್ಮಾಲ್ ಕ್ಯಾಪ್ 50 ಶೇಕಡಾ 1.61, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 1.17, ನಿಫ್ಟಿ 100 ಶೇಕಡಾ 0.93, ನಿಫ್ಟಿ 200 ಶೇಕಡಾ 0.91 ಮತ್ತು ನಿಫ್ಟಿ 500 ಶೇಕಡಾ 0.89 ರಷ್ಟು ಏರಿಕೆಯಾಗಿವೆ.

ಲಿಸ್ಟಿಂಗ್​ ಆದ ಕೇವಲ 10 ದಿನಗಳ ನಂತರ ರಿಲಯನ್ಸ್ ಇಂಡಸ್ಟ್ರೀಸ್​ನ ವಿಭಜಿತ ಹಣಕಾಸು ವ್ಯವಹಾರವಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರನ್ನು (ಜೆಎಫ್‌ಎಸ್) ಅನ್ನು ಸೆಪ್ಟೆಂಬರ್ 1 ರಿಂದ ಸೆನ್ಸೆಕ್ಸ್ ಸೇರಿದಂತೆ ಬಿಎಸ್‌ಇ ಸೂಚ್ಯಂಕಗಳಿಂದ ತೆಗೆದುಹಾಕಲಾಗುತ್ತಿದೆ. ಏತನ್ಮಧ್ಯೆ, ಬಿಎಸ್‌ಇ ಸೆನ್ಸೆಕ್ಸ್​ನಿಂದ ತೆಗೆದುಹಾಕಿದ ದಿನದಂದು ಜೆಎಫ್‌ಎಸ್ ಷೇರುಗಳು ಇಂದು ಎನ್‌ಎಸ್‌ಇಯಲ್ಲಿ 4.5% ಕ್ಕಿಂತ ಹೆಚ್ಚಾಗಿದೆ.

ಗುರುವಾರದ ಅಂತ್ಯದ ವೇಳೆಗೆ ಜೆಎಫ್‌ಎಸ್​ನ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು 1,429.49 ಕೋಟಿ ರೂ.ಗೆ ಏರಿದೆ. ಪ್ರಸ್ತುತ, ಎನ್‌ಎಸ್‌ಇಯ ನಿಫ್ಟಿ-50 ನಲ್ಲಿ ಅದರ ಮಾರುಕಟ್ಟೆ ಬಂಡವಾಳ ಮೌಲ್ಯ 1.55 ಲಕ್ಷ ಕೋಟಿ ರೂ. ಆಗಿದೆ.ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಜಿಡಿಪಿ ಬೆಳವಣಿಗೆಯು ಷೇರು ಮಾರುಕಟ್ಟೆಯಲ್ಲಿ ಕಂಡು ಬಂದ ಆವೇಗಕ್ಕೆ ಕಾರಣವಾಗಿದೆ. ಇದಲ್ಲದೆ, ಭಾರತದ ಉತ್ಪಾದನಾ ಪಿಎಂಐ ಕೂಡ ಆಗಸ್ಟ್​​ನಲ್ಲಿ 3 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಹೂಡಿಕೆದಾರರು ಮುಂಬರುವ ಸೆಪ್ಟೆಂಬರ್ ಸಭೆಯ ಫೆಡರಲ್ ರಿಸರ್ವ್​ ನೀತಿ ಹಾಗೂ ಯುಎಸ್ ಉದ್ಯೋಗ ಡೇಟಾ ವರದಿಗಾಗಿ ಕಾಯುತ್ತಿದ್ದಾರೆ.