ಕನ್ಹಯ್ಯ ಲಾಲ್ ತೇಲಿ ಹತ್ಯೆ ಪ್ರಕರಣ: 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ

ನವದೆಹಲಿ: ಈ ವರ್ಷ ಜೂನ್ 28 ರಂದು ಇಬ್ಬರು ಭಯೋತ್ಪಾದಕರಿಂದ ಕನ್ಹಯ್ಯ ಲಾಲ್ ತೇಲಿ ಎಂಬ ಟೈಲರ್ ನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಗುರುವಾರ ರಾಜಸ್ಥಾನದ ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ಆರ್‌ಸಿ-27/2022/ಎನ್‌ಐಎ/ಡಿಎಲ್‌ಐ) ಸಲ್ಲಿಸಿದೆ.

ರಿಯಾಜ್ ಅಟ್ಟಾರಿ ಮತ್ತು ಗೋಸ್ ಮೊಹಮ್ಮದ್ ಎನ್ನುವ ಆರೋಪಿಗಳು ದೇಶಾದ್ಯಂತ ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮದಲ್ಲಿ ಹತ್ಯೆಯ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಭಯೋತ್ಪಾದಕ ಗ್ಯಾಂಗ್ ನ ಮಾಡ್ಯೂಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿಗಳು ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಮೂಲಭೂತವಾದಿಗಳಾಗಿದ್ದರು ಭಾರತದ ಒಳಗೆ ಮತ್ತು ಹೊರಗಿನಿಂದ ಪ್ರಸಾರವಾಗುತ್ತಿರುವ ಆಡಿಯೋ/ವೀಡಿಯೋ/ಸಂದೇಶಗಳಿಂದ ಪ್ರೇರಿತರಾಗಿದ್ದರು. ಆರೋಪಿಗಳು ಮಾರಣಾಂತಿಕ ಶಸ್ತ್ರಗಳಿಂದ ಕನ್ಹಯ್ಯ ಲಾಲ್ ಅವರ ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಹಾಡುಹಗಲೆ ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೆ ಅಂಗಡಿಯಲ್ಲಿದ್ದ ಸಹೋದ್ಯೋಗಿಯ ಮೇಲೆ ದಾಳಿ ಮಾಡಿ ಹತ್ಯೆಯ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಮಾಡಿದ್ದಾರೆ. ಭಾರತದ ಜನರಲ್ಲಿ ಭಯವನ್ನು ಉಂಟುಮಾಡುವ ಉದ್ದೇಶದಿಂದ ಅವರು ಮತ್ತೊಂದು ಬೆದರಿಕೆ ವೀಡಿಯೊವನ್ನೂ ಚಿತ್ರೀಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ನ್ಯೂಸ್ ೧೮ ವರದಿ ಮಾಡಿದೆ.

ಆರೋಪಿಗಳ ಮೇಲೆ ಐಪಿಸಿಯ ಸೆಕ್ಷನ್ 120 ಬಿ, 449, 302, 307, 324, 153 (ಎ), 153 (ಬಿ), 295 (ಎ), ಯುಎಪಿಎ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 16, 18 ಮತ್ತು 20 ಮತ್ತು ಸೆಕ್ಷನ್ 4/25 (1 ಬಿ) (ಬಿ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ರಾಜಸ್ಥಾನದ ಮೊಹಮ್ಮದ್ ರಿಯಾಜ್ ಅಟ್ಟಾರಿ, ಮೊಹಮ್ಮದ್ ಗೋಸ್, ಮೊಹಸೀನ್ ಖಾನ್, ಆಸಿಫ್ ಹುಸೈನ್, ಮೊಹಮ್ಮದ್ ಮೊಹ್ಸಿನ್, ವಸಿಮ್ ಅಲಿ, ಫ಼ರ್ಹಾದ್ ಮೊಹಮ್ಮದ್ ಶೇಖ್, ಮೊಹಮ್ಮದ್ ಜಾವೇದ್, ಮುಸ್ಲಿಮ್ ಖಾನ್ ಹಾಗೂ ಪಾಕಿಸ್ತಾನ ಕರಾಚಿಯ ಸಲ್ಮಾನ್ ಮತ್ತು ಅಬು ಇಬ್ರಾಹಿಂ ಕೃತ್ಯದಲ್ಲಿ ಭಾಗಿಯಾಗಿದ್ದು ಎಲ್ಲರ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿದೆ.