ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮಾಹಿತಿ ನೀಡಿದವರಿಗೆ 25 ಲಕ್ಷ ಬಹುಮಾನ ಘೋಷಿಸಿದ ಎನ್‌ಐಎ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಮತ್ತು ಆತನ ಸಹಚರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದ್ದು, ಡಿ ಕಂಪನಿಯು ಭಾರತದಲ್ಲಿ ಶಸ್ತ್ರಾಸ್ತ್ರ, ಡ್ರಗ್ಸ್, ನಕಲಿ ಭಾರತೀಯ ಕರೆನ್ಸಿ ಕಳ್ಳಸಾಗಣೆ ಮಾಡುವ ಘಟಕವನ್ನು ಸ್ಥಾಪಿಸಿರುವ ಬಗ್ಗೆ ಹಾಗೂ ಪಾಕಿಸ್ತಾನಿ ಏಜೆನ್ಸಿಗಳು ಮತ್ತು ಭಯೋತ್ಪಾದಕ ಸಂಘಟನೆಗಳ ಸಹಾಯದಿಂದ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಚಿಸಿರುವ ಬಗ್ಗೆ ಸಂಸ್ಥೆಯು ತನಿಖೆ ನಡೆಸಿದೆ. ಎನ್‌ಐಎ ಆತನ ಫೋಟೋ ಬಿಡುಗಡೆ ಮಾಡಿದ್ದು, ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ.

ಛೋಟಾ ಶಕೀಲ್‌ ಮಾಹಿತಿಗೆ 20 ಲಕ್ಷ ರೂಪಾಯಿ, ಅನೀಸ್, ಚಿಕ್ನಾ ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮೊಮ್ ಅಲಿಯಾಸ್ ಟೈಗರ್ ಮೆಮೊಮ್‌ ಮಾಹಿತಿಗೆ ತಲಾ 15 ಲಕ್ಷ ರೂಪಾಯಿ ಬಹುಮಾನವನ್ನು ಎನ್‌ಐಎ ಘೋಷಿಸಿದೆ.

 

ಭೂಗತ ಪಾತಕಿ ದಾವೂದ್ ಐಎಸ್‌ಐ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಇ-ಮೊಹಮ್ಮದ್ ನೆರವಿನೊಂದಿಗೆ, ಪ್ರಭಾವಿ ಉದ್ಯಮಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಲು ಭಾರತದಲ್ಲಿ ವಿಶೇಷ ಘಟಕವನ್ನು ಸ್ಥಾಪಿಸಿದ್ದಾನೆ ಎಂದು ಗುಪ್ತಚರ ಇಲಾಖೆಯ ಮಾಹಿತಿ ಪಡೆದ ನಂತರ ಫೆಬ್ರವರಿಯಲ್ಲಿ ಎನ್‌ಐಎಯು ಆತನ ಸಹಚರರ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ. ದಾವೂದ್ ಗೆ ಸಂಬಂಧಪಟ್ಟ ಹಲವಾರು ಸ್ಥಳಗಳಲ್ಲಿ ದಾಳಿಗಳನ್ನು ಕೂಡಾ ಸಂಸ್ಥೆಯು ನಡೆಸಿದೆ.

ಭಾರತ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳು 2003 ರಲ್ಲಿ, ದಾವೂದ್ ಇಬ್ರಾಹಿಂನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ, 1993 ರ ಮುಂಬೈ ಸ್ಫೋಟಗಳಲ್ಲಿ ಅವನ ಪಾತ್ರಕ್ಕಾಗಿ ಅವನನ್ನು ಹಿಡಿದುಕೊಟ್ಟವರಿಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿವೆ. ಈತ ಹಲವು ಸುಲಿಗೆ, ಕೊಲೆ ಹಾಗೂ ಕಳ್ಳಸಾಗಣೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಚಿತ್ರಕೃಪೆ: ಇಂಡಿಯಾ ವಾಯ್ಸ್