ಬೈರುತ್ (ಲೆಬನಾನ್): ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಮಧ್ಯೆ ಹಿಜ್ಬುಲ್ಲಾ ಗುಂಪಿನ ನಾಯಕ ಬುಧವಾರ ಹಿರಿಯ ಹಮಾಸ್ ಮತ್ತು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ನಾಯಕರೊಂದಿಗೆ ಮಾತುಕತೆ ನಡೆಸಿದರು.ಇಸ್ರೇಲ್ ವಿರುದ್ಧ ಸಂಚು ರೂಪಿಸುತ್ತಿರುವ ಮೂರು ಪ್ರಮುಖ ಉಗ್ರಗಾಮಿ ಸಂಘಟನೆಗಳ ನಾಯಕರು ಬೈರುತ್ನಲ್ಲಿ ಒಟ್ಟಾಗಿ ಸಭೆ ನಡೆಸಿದ್ದಾರೆ.
ಹಿಜ್ಬುಲ್ಲಾ ನಿಯಂತ್ರಣದಲ್ಲಿರುವ ಲೆಬನಾನ್ ಸರ್ಕಾರಿ ಮಾಧ್ಯಮದ ಪ್ರಕಾರ- ಗಾಜಾ ಹಾಗೂ ಪಶ್ಚಿಮ ದಂಡೆಯಲ್ಲಿರುವ ತುಳಿತಕ್ಕೊಳಗಾದ ನಮ್ಮ ಜನರ ವಿರುದ್ಧ ಇಸ್ರೇಲ್ ನ ವಿಶ್ವಾಸಘಾತುಕ ಮತ್ತು ಕ್ರೂರ ಆಕ್ರಮಣವನ್ನು ನಿಲ್ಲಿಸಲು ಗಾಜಾ ಮತ್ತು ಪ್ಯಾಲೆಸ್ಟೈನ್ನಲ್ಲಿನ ಪ್ರತಿರೋಧಕ್ಕೆ ವಾಸ್ತವಿಕವಾದ ಗೆಲುವು ಸಾಧಿಸುವುದು ಸಭೆಯಲ್ಲಿ ಭಾಗವಹಿಸಿದ್ದ ಮೂರು ಗುಂಪಿನ ನಾಯಕರ ಉದ್ದೇಶವಾಗಿದೆ. -ಇಷ್ಟು ಬಿಟ್ಟರೆ ಲೆಬನಾನ್ ಸರ್ಕಾರಿ ಮಾಧ್ಯಮ ಸಭೆಯ ಬಗ್ಗೆ ಬೇರಾವುದೇ ಮಾಹಿತಿ ನೀಡಿಲ್ಲ.
ಲೆಬನಾನ್ನ ಹಿಜ್ಬುಲ್ಲಾ ಒಂದು ಶಿಯಾ ಮುಸ್ಲಿಂ ರಾಜಕೀಯ ಪಕ್ಷ ಮತ್ತು ಲೆಬನಾನ್ ಮೂಲದ ಉಗ್ರಗಾಮಿ ಗುಂಪು ಆಗಿದೆ. ಲೆಬನಾನ್ನಲ್ಲಿ ತನ್ನ ವ್ಯಾಪಕ ಭದ್ರತಾ ವ್ಯವಸ್ಥೆ, ರಾಜಕೀಯ ಸಂಘಟನೆ ಮತ್ತು ಸಾಮಾಜಿಕ ಸೇವೆಗಳ ಜಾಲದ ಮೂಲದ ಗುಂಪು ದೇಶದೊಳಗೆ ತನ್ನದೇ ಆದ ಪ್ರತ್ಯೇಕ ವ್ಯವಸ್ಥೆಯನ್ನು ಸೃಷ್ಟಿಸಿದೆ.ಈ ನಿರ್ಣಾಯಕ ಹಂತದಲ್ಲಿ ತಾವು ಮೂರು ಗುಂಪುಗಳು ಇತರ ಇರಾನ್ ಬೆಂಬಲಿತ ಉಗ್ರವಾದಿ ಗುಂಪುಗಳೊಂದಿಗೆ ಸೇರಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿಜ್ಬುಲ್ಲಾ ಗುಂಪಿನ ನಾಯಕ ಹಸನ್ ನಸ್ರಲ್ಲಾ ಅವರ ಅಭಿಪ್ರಾಯಕ್ಕೆ ಹಮಾಸ್ ನಾಯಕ ಸಾಲೇಹ್ ಅಲ್-ಅರೌರಿ ಮತ್ತು ಇಸ್ಲಾಮಿಕ್ ಜಿಹಾದ್ ನಾಯಕ ಜಿಯಾದ್ ಅಲ್-ನಖ್ಲೆ ಅವರು ಸಹಮತಿ ವ್ಯಕ್ತಪಡಿಸಿದರು ಎಂದು ಸಭೆಯ ನಂತರ ಹೊರಡಿಸಲಾದ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹರಕತ್ ಅಲ್-ಮುಕಾವಾಮಾ ಅಲ್-ಇಸ್ಲಾಮಿಯಾ (ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್) ಎಂಬುದರ ಸಂಕ್ಷಿಪ್ತ ರೂಪವಾದ ಹಮಾಸ್ ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಉಗ್ರಗಾಮಿ ಸಂಘಟನೆಯಾಗಿದೆ. ಇದು ಪ್ರದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಇದು ಸುನ್ನಿ ಇಸ್ಲಾಮಿಕ್ ಉಗ್ರಗಾಮಿ ಸಂಘನೆಯಾಗಿದ್ದು, ಇಸ್ರೇಲ್ ನಾಶಕ್ಕೆ ಬದ್ಧವಾಗಿರುವ ಇಸ್ಲಾಮಿಕ್ ಪ್ಯಾಲೆಸ್ಟೈನ್ ದೇಶವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದು ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿನ ಎರಡನೇ ಅತಿದೊಡ್ಡ ಉಗ್ರಗಾಮಿ ಸಂಘಟನೆಯಾಗಿದೆ.