ಇಂದು ಜನಪ್ರಿಯ ನಾಯಕ ನರೇಂದ್ರ ಮೋದಿ ಹುಟ್ಟುಹಬ್ಬ: ಪ್ರಧಾನಿ ಬಗ್ಗೆ ಒಂದಷ್ಟು ಮಾಹಿತಿ

ದೇಶದ ಅಪ್ರತಿಮ ಜನನಾಯಕ, ಭಾರತವನ್ನು ವಿಶ್ವಗುರುವನ್ನಾಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಸೆ.17) 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ರಾಜಕೀಯ ಹಾದಿಯಲ್ಲಿ ಬಿಜೆಪಿಯ ಸಂಘಟನೆ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿ, ಪಕ್ಷವನ್ನು ಸಂಸತ್​ನ ಗದ್ದುಗೆಗೇರಿಸುವಲ್ಲಿ ಯಶಸ್ವಿಯಾಗಿರುವ ಮೋದಿ ಅವರು ಎರಡನೇ ಅವಧಿಗೂ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದ್ದಾರೆ.

ಇಡೀ ಜಗತ್ತಿಗೆ ಕಂಟಕವಾಗಿದ್ದ ಕೊರೊನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ದೇಶವನ್ನು ಸುರಕ್ಷತೆಯ ಕಡೆಗೆ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಸದ್ದು ಅಡಗಿಸುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಸದಾ ಕಾಲು ಕೆರೆದು ಜಗಳಕ್ಕೆ ಬರುವ ಚೀನಾ ದೇಶಕ್ಕೂ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದಾರೆ. ಐದು ರೆಫಲ್ ಯುದ್ಧ ವಿಮಾನಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಮೂಲಕ ವಿರೋಧಿಗಳಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ  ಪ್ರಧಾನಿ.

ಹುಟ್ಟು-ಹಿನ್ನೆಲೆ: ದಾಮೋದರದಾಸ್ ಮೂಲಚಂದ್ ಮೋದಿ-ಹೀರಾಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದ (1950ರ ಸೆಪ್ಟೆಂಬರ್ 17, ಗುಜರಾತಿನ ವಡ್​ನಗರ್) ನರೇಂದ್ರ ಮೋದಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅವರಿಗೆ ಮೂವರು ಸೋದರರು, ಇಬ್ಬರು ಸೋದರಿಯರಿದ್ದಾರೆ. 1967ರಲ್ಲಿ ಜಶೋದಾಬೆನ್ ಅವರೊಂದಿಗೆ ಮೋದಿ ವಿವಾಹವಾಯಿತು.

ವಡ್​ನಗರದ ಕುಮಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ಮೋದಿ ಒಮ್ಮೆ ಕಬಡ್ಡಿ ಪಂದ್ಯವೊಂದರಲ್ಲಿ ಚಾಂಪಿಯನ್ ತಂಡವನ್ನು ಎದುರಿಸಬೇಕಿತ್ತು. ಎಲ್ಲರೂ ಗೆಲುವಿನ ಆಸೆ ಕೈಬಿಟ್ಟಿದ್ದರು. ಆದರೆ ಪಂದ್ಯ ಮುಂದುವರಿಯುತ್ತಿದ್ದಂತೆ ಅನಿರೀಕ್ಷಿತ ತಿರುವು ದಕ್ಕಿ ಗೆಲುವೂ ಸಿಕ್ಕಿತು. ಬಾಲಕ ಮೋದಿ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದ. ಪ್ರತಿದಿನ ಸಂಜೆ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದ ಮೋದಿ ಗೆಳೆಯರೊಂದಿಗೆ ಕಬಡ್ಡಿ ಆಡುವುದು ಮಾಮೂಲಾಗಿತ್ತು. ಶಾಲೆಯಲ್ಲಿ ಎನ್​ಸಿಸಿಗೆ ಸೇರಿಕೊಂಡ ಕಾರಣ, ನಟನೆ, ಭಾಷಣದ ಕಲೆಯೂ ಸಿದ್ಧಿಸಿತು. ಜೀವನಕ್ಕೊಂದು ಶಿಸ್ತೂ ಬಂದಿತು.

ಸಂನ್ಯಾಸ ಸ್ವೀಕಾರಕ್ಕೆಂದು ಬಾಲ್ಯದಲ್ಲೇ (ಶಾಲಾಶಿಕ್ಷಣದ ಬಳಿಕ) ಕೈಯಲ್ಲಿ ಹಣವನ್ನೂ ಇಟ್ಟುಕೊಳ್ಳದೆ ಕೇವಲ 2 ಜೊತೆ ಬಟ್ಟೆಯೊಂದಿಗೆ ಮನೆ ಬಿಟ್ಟಿದ್ದ ಮೋದಿ, ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಆಶ್ರಮ ಅಲ್ಲಿಂದ ಹಿಮಾಲಯಕ್ಕೂ ತೆರಳಿ ಸಾಧುಸಂತರ ಜತೆ ನೆಲೆಸಿದ್ದರು. ಆದರೆ ಸಮಾಜದಲ್ಲಿದ್ದುಕೊಂಡೇ ಸೇವೆ-ಸಮರ್ಪಣೆ ಮೂಲಕ ಏನಾದರೂ ಸಾಧಿಸಬೇಕು ಎಂದು ನಿಶ್ಚಯಿಸಿ 2 ವರ್ಷಗಳ ಬಳಿಕ ಮನೆಗೆ ಮರಳಿದ್ದರು. ಈಗಲೂ ಬೇಲೂರು ರಾಮಕೃಷ್ಣ ಆಶ್ರಮದೊಂದಿಗೆ ಅವರಿಗೆ ಒಡನಾಟವಿದೆ.

ಫ್ಯಾಷನ್ ಐಕಾನ್
ಎದುರಿರುವರನ್ನು ಮಾತುಗಾರಿಕೆಯಿಂದ ಗೆಲ್ಲುವಂತೆಯೇ ವಿಭಿನ್ನ ಶೈಲಿಯ ದಿರಿಸುಗಳಿಂದಲೂ ಸೆಳೆಯುವುದು ಅವರ ವೈಶಿಷ್ಟ್ಯ. ಯುವಕರಲ್ಲಿ ಕುರ್ತಾ ಕ್ರೇಜ್ ಹೆಚ್ಚಿದ್ದೇ ಮೋದಿಯಿಂದ ಎಂಬುದು ‘ಬಹುಮತಾಭಿಪ್ರಾಯ’! ಸಮಾರಂಭ-ಸನ್ನಿವೇಶಕ್ಕೆ ತಕ್ಕಂತೆ ಅವರ ವೇಷಭೂಷಣ ಬದಲಾಗುತ್ತದೆ. ವಿದೇಶಿ ಅತಿಥಿಗಳ ಭೇಟಿಯ ವೇಳೆ ಸೂಟು-ಬೂಟು, ಅದ್ದೂರಿ ಸಮಾರಂಭಗಳಲ್ಲಿ ಭಾಗಿಯಾಗುವಾಗ ರೇಷ್ಮೆ ಕುರ್ತಾ, ಮಿಕ್ಕ ವೇಳೆ ಖಾದಿ ಕುರ್ತಾ ಅವರ ಆಯ್ಕೆಗಳು. ಸ್ವಲ್ಪ ಹೆಚ್ಚುಹಣ ಖರ್ಚುಮಾಡುವುದು ಕುರ್ತಾ, ಗಡಿಯಾರ, ಪೆನ್ನು, ಕನ್ನಡಕ ಮತ್ತು ಚಪ್ಪಲಿಗಳಿಗೆ.

ಮೋದಿ ದಿನಚರಿ
* ಸಮಯದ ಮೌಲ್ಯ, ಅದರ ಸದ್ಬಳಕೆಯ ಅರಿವಿರುವ ಮೋದಿ ದಿನಚರಿಯೂ ಶಿಸ್ತುಬದ್ಧ, ಯೋಜನಾಬದ್ಧ
*ಪ್ರತಿದಿನ ಮುಂಜಾನೆ 3.30-3.45ರ ವೇಳೆಗೆ ಎದ್ದು ಪ್ರಾತರ್ವಿಧಿಗಳನ್ನು ಪೂರೈಸಿ 1 ಗಂಟೆ ಪ್ರಾಣಾಯಾಮ-ಯೋಗಾಭ್ಯಾಸ ಮಾಡುತ್ತಾರೆ. ಅವರ ನಳನಳಿಸುವ ಆರೋಗ್ಯದ ಗುಟ್ಟು ಇದೇ
* ಉಪಾಹಾರದ ಬಳಿಕ ಪತ್ರಿಕೆಗಳ ಓದು, ಇ-ಮೇಲ್​ಗಳಿಗೆ ಉತ್ತರಿಸುವಿಕೆ
ಬಳಿಕ ತಡರಾತ್ರಿಯವರೆಗೆ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಗಳ ನಿರ್ವಹಣೆ. ವಿಶ್ರಾಂತಿಗೆಂದು ರಜೆ ತೆಗೆದುಕೊಂಡ ನಿದರ್ಶನವಿಲ್ಲ.
ಫೇವರಿಟ್ ತಿನಿಸುಗಳು

ಮೋದಿ ಪಾಕಪ್ರಿಯರೂ ಹೌದು, ಗುಜರಾತಿ ತಿನಿಸುಗಳೆಂದರೆ ಅಚ್ಚುಮೆಚ್ಚು. ಮನೆಯಲ್ಲಿದ್ದರೂ ಪ್ರವಾಸದಲ್ಲಿದ್ದರೂ ಊಟದಲ್ಲಿ ಗುಜರಾತಿ ಖಾದ್ಯಗಳು ಇರಲೇಬೇಕು. ಅಪ್ಪಟ ಸಸ್ಯಾಹಾರಿ ಮೋದಿ ಇಷ್ಟದ ಖಾದ್ಯಗಳು ಇಂತಿವೆ:

 ಕುರ್ತಾ ರಹಸ್ಯ

ಮೋದಿ ಅರ್ಧತೋಳಿನ ಕುರ್ತಾ ಧರಿಸಲು ಆರಂಭಿಸಿದ್ದರ ಹಿಂದೆ ಒಂದು ಸ್ವಾರಸ್ಯವಿದೆ. ಅದನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಹೀಗೆ- ‘ಸಂಘದ ಪ್ರಚಾರಕನಾಗಿದ್ದಾಗ ಸಂಚಾರದಲ್ಲೇ ಇರುತ್ತಿದ್ದೆ. ಆಗ ನನ್ನಲ್ಲಿದ್ದುದು ಪುಟ್ಟ ಬ್ಯಾಗ್; ಅದರಲ್ಲಿ ಕೆಲವೇ ಉಡುಪು. ಉಡುಪನ್ನು ನಾನೇ ಸ್ವಚ್ಛಗೊಳಿಸಿಕೊಳ್ಳಬೇಕಿತ್ತು. ಉದ್ದ ತೋಳಿನ ಕುರ್ತಾ ಬಹುಬೇಗ ಕೊಳೆಯಾಗುತ್ತಿತ್ತು, ಅದನ್ನು ತೊಳೆಯಲು ಹೆಚ್ಚು ಸಮಯ, ಶ್ರಮ ಆಗುತ್ತಿತ್ತು. ಹೀಗಾಗಿ ಕುರ್ತಾ ತೋಳನ್ನು ಅರ್ಧ ಕತ್ತರಿಸಿ ಹಾಕಿಕೊಂಡೆ. ಅದು ಚೆನ್ನಾಗೇ ಹೊಂದಿಕೊಂಡಿತು. ಅಂದಿನಿಂದ ಅರ್ಧತೋಳಿನ ಕುರ್ತಾ ನನ್ನ ಅಚ್ಚುಮೆಚ್ಚಿನ ದಿರಿಸು…’

ಪರರ ಕಷ್ಟಗಳಿಗೆ ಸ್ಪಂದಿಸಿ ನೆರವಿಗೆ ಧಾವಿಸುವ ಗುಣ ಬಾಲ್ಯದಿಂದಲೂ ಅವರ ಮೈಗೂಡಿದೆ. 1965ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ 15 ವರ್ಷದವರಾಗಿದ್ದ ಮೋದಿ, ಸ್ವಯಂಪ್ರೇರಣೆಯಿಂದ ಸೈನಿಕರ ಸರಕು ಸಾಗಣೆಗೆ ನೆರವಾಗಿದ್ದರು. 1967ರಲ್ಲಿ ನೆರೆಪೀಡಿತ ಗುಜರಾತ್ ಸಂತ್ರಸ್ತರ ಸೇವೆ ಮಾಡಿದ್ದರು. ಸ್ವಾಮಿ ವಿವೇಕಾನಂದರ ಬಹುದೊಡ್ಡ ಅಭಿಮಾನಿಯಾಗಿರುವ ಮೋದಿ, ‘ವಿವೇಕಾನಂದ ಯುವ ವಿಕಾಸಯಾತ್ರೆ’ ಕೈಗೊಂಡಿದ್ದರ ಜತೆಗೆ, ವಿವೇಕಾನಂದರ ಕುರಿತಾದ ಸಾಹಿತ್ಯವನ್ನೂ ಆಳವಾಗಿ ಅಭ್ಯಸಿಸಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ರಾಜಕೀಯ ಜೀವನದ ಮೇಲ್ಪಂಕ್ತಿಯಾಗಿ ಸ್ವೀಕರಿಸಿದ್ದಾರೆ.