ಉಡುಪಿ: ಮಹಿಳಾ ಸಾಧಕರೊಂದಿಗೆ ಸಂವಾದ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

ಉಡುಪಿ: ಸಮಾಜದಲ್ಲಿ ಇಂದು ಆತ್ಮೀಯತೆ, ಪ್ರೀತಿ, ಸಂಬಂಧಗಳು ಕಡಿಮೆ ಆಗುತ್ತಿದ್ದು, ಅವುಗಳನ್ನು ಬೆಸೆಯುವ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ವೈದೇಹಿ ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್‌ ಉಡುಪಿ ಮಳಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಾಧಕರೊಂದಿಗೆ ಸಂವಾದ, ಸನ್ಮಾನ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಒಳ್ಳೆಯ ಮನಸ್ಸಿದ್ದರೆ ದೇಶ, ಸಮಾಜ, ಮನೆ ಸೇರಿದಂತೆ ಎಲ್ಲರನ್ನು ಕೂಡ ಗೆಲ್ಲಬಹುದು. ಮನಸ್ಸು ಹಾಳಾದರೆ ಅದಕ್ಕಿಂತ ದೊಡ್ಡ ಪ್ರಳಯ ಬೇರೊಂದಿಲ್ಲ. ಆದ್ದರಿಂದ ಒಳ್ಳೆಯ ಮನಸ್ಸುಗಳು ಹೆಚ್ಚಾಗಬೇಕು ಎಂದರು.

ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಸಾಧನೆಯ ಹಿಂದೆ ಇನ್ನೊಬ್ಬರ  ಪ್ರೋತ್ಸಾಹ ಇರುತ್ತದೆ. ಹಾಗೆ ಸಾಧನೆಗೆ ಮಾನಸಿಕ ಮತ್ತು ದೈಹಿಕ ಸದೃಢತೆ ಕೂಡ ಅಗತ್ಯವಾಗಿದೆ. ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿದ್ದಾರೆ. ಮಹಿಳೆಯರು ತಮ್ಮ ಮುಂದೆ ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು  ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಾದ ವೈದೇಹಿ ಮಣಿಪಾಲ(ಸಾಹಿತ್ಯ), ಅನುಪಮ ಎಸ್‌. ಶೆಟ್ಟಿ ಬಸ್ರೂರು(ಶಿಕ್ಷಣ), ಜಾನಕಿ ಹಂದೆ ಕೋಟ(ಕೃಷಿ), ಸುಪ್ರಿಯ ಕಾಮತ್‌ ಬಾರ್ಕೂರು(ಉದ್ಯಮ), ವಿಜೇತ ಪೈ ಅಜೆಕಾರು (ಕ್ರೀಡೆ), ನಂದಿನಿ ಭಟ್‌ ಮಣಿಪಾಲ( ಯೋಗ) ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಶಾಲೆಗಳ ಒಟ್ಟು 30 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ
ವಿತರಿಸಲಾಯಿತು. ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್‌ ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್‌ ರೆಹಮಾನ್‌, ಮ್ಯಾನೇಜರ್‌ ರಾಘವೇಂದ್ರ ನಾಯಕ್‌ ಉಪಸ್ಥಿತರಿದ್ದರು. ಅವಿನಾಶ್‌ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.