ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆಗೈದು, ತೇಜೋವಧೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಪೊಲೀಸ್ ಇಲಾಖೆಯು ತಪ್ಪಿತಸ್ಥರನ್ನು ಬಂಧಿಸಿ ಇಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಡ್ಯಾರ್ ಕಣ್ಣೂರಿನ ಕುಂಡಾಲ ನಿವಾಸಿ ರಿಯಾಝ್ ಎಂಬವರು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೌದಿ ಅರೇಬಿಯಾದಲ್ಲಿರುವ ಮುಹಮ್ಮದ್ ಪಣಕಜೆ, ಬೆಳ್ತಂಗಡಿಯ ಆದಮ್, ಚೊಕ್ಕಬೆಟ್ಟುವಿನ ಜುಬೇರ್ ಸಲಫಿ, ಕುಳಾಯಿಯ ಅಬ್ದುಲ್ ವಹಾಬ್ ಎಂಬವರು ನಮ್ಮ ವಿರುದ್ಧ ವೈಯಕ್ತಿಕ ನಿಂದನೆಗೈದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಜಿಲ್ಲೆಯಲ್ಲಿ ಅಶಾಂತಿಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಸೌದಿಯಲ್ಲಿರುವ ಮುಹಮ್ಮದ್ ಪಣಕಜೆ ಕೆಲವು ತಿಂಗಳಿನಿಂದ ಹಿಂದೂ ಮುಖಂಡರು, ವಿವಿಧ ಧರ್ಮಗಳ ದೇವರನ್ನು ಹಿಯಾಳಿಸಿ, ವಿಕೃತಗೊಳಿಸಿ, ಅಶ್ಲೀಲವಾಗಿ ಚಿತ್ರಿಸಿ, ಷಡ್ಯಂತ್ರದ ಮೂಲಕ ಜಿಲ್ಲೆಯಲ್ಲಿ ಅಶಾಂತಿಗೆ ಕಾರಣನಾಗಿದ್ದಾನೆ. ಈತನ ಅನ್ಯಾಯದ ವಿರುದ್ಧ ಸೈಬರ್ ಕ್ರೈಂ ಠಾಣೆಗೆ, ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ನ್ಯಾಯಾಲಯಕ್ಕೂ ಖಾಸಗಿ ದೂರು ನೀಡಲಾಗುವುದು ಎಂದು ರಿಯಾಝ್ ತಿಳಿಸಿದರು.
ಮೂಡುಬಿದಿರೆಯ ಅಬ್ದುಲ್ ಲತೀಫ್ ಮಾತನಾಡಿ, ಸುಳ್ಯ ಮೂಲದ ಇಬ್ರಾಹೀಂ ಖಲೀಲ್ ಎಂಬಾತ ಕೂಡ ಹೀಗೆ ನಕಲಿ ಖಾತೆ ತೆರೆದು ನನ್ನ ಸಹಿತ ಹಲವರ ತೇಜೋವಧೆ ಮಾಡಿದ್ದಾನೆ. ಆತನ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸುದ್ಧಿಗೋಷ್ಠಿಯಲ್ಲಿ ಉಜಿರೆಯ ಮುಹಮ್ಮದ್, ಜೆಪ್ಪುವಿನ ಗಿರೀಶ್ ಗಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.