ಕಾರ್ಕಳ: ದೇಸೀ ತಳಿಗಳ ಗೋ ಸಂವರ್ಧನೆ ಮತ್ತು ಗೋ ಸಾಕಣೆ ಅಪರೂಪವಾಗಿರುವ ನಡುವೆ ಆಶಾಕಿರಣದಂತೆ ಕಾರ್ಕಳ ನಗರ ಮಧ್ಯೆ ಬಂಡೀಮಠ ಬಸ್ ನಿಲ್ದಾಣದ ಸನಿಹ ದೇಸೀ ತಳಿಗಳ ಗೋ ಶಾಲೆಯೊಂದು ಅಸ್ತಿತ್ವದಲ್ಲಿದೆ. ನಗರದಲ್ಲಿ ವಾಸ್ತವ್ಯವಿರುವ ವೈದಿಕ ಗೋಪಿನಾಥ ಪುರಾಣಿಕ ದಂಪತಿ ಬಂಡೀಮಠದ ತಮ್ಮ ನಿವಾಸದಲ್ಲೇ ಕಳೆದ ೬ ವರ್ಷಗಳಿಂದ ಇಂಥದ್ದೊಂದು ಸಾಹಸವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ.
ಗೋವುಗಳು ಇದ್ದವು, ಗೋ ಶಾಲೆ ಕಟ್ಟಡವಿರಲಿಲ್ಲ. ಆದರೂ ತಗಡಿನ ಶೀಟು ಹೊದಿಸಿದ ತನ್ನ ವಾಸದ ಮನೆಯನ್ನೇ ಗೋ ಶಾಲೆಯಾಗಿ ಬಳಸಿ ಗೋವುಗಳ ಜೊತೆಗೇ ಸಹಜೀವನ ನಡೆಸುತ್ತ ಬಂದ ವೈಶಿಷ್ಟ್ಯ ಈ ಕುಟುಂಬದ್ದು.
ಈ ದಂಪತಿ ಕುಟುಂಬ ಗೋ ಸೇವೆಗಾಗಿಯೇ ಮೀಸಲಾಗಿರುವ ಜೊತೆ ಒಂದಿಬ್ಬರು ಅನಾಥ ಸಂತ್ರಸ್ಥರು ಇಲ್ಲಿ ಆಶ್ರಯ ಪಡೆದು ಗೋ ಸೇವೆಯಲ್ಲಿ ತೊಡಗಿದ್ದಾರೆ.
ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದ ಈ ವಿಶಿಷ್ಟ ಗೋ ಶಾಲೆಯಲ್ಲಿ ಹುಟ್ಟಿ ಬೆಳೆದ ಆಕಳು ಜಾನುವಾರುಗಳನ್ನು ಸಾಕುವ ಸದುದ್ದೇಶ ಉಳ್ಳವರಿಗೆ ಉಚಿತವಾಗಿ ವಿತರಣೆಯ ದಾಖಲೆ ಹೊಂದಿದೆ ಈ ಕುಟುಂಬ.
ಇದೀಗ ಆಕಳುಗಳ ಸಂಖ್ಯೆ ೨೭ಕ್ಕೆ ವೃದ್ಧಿಸಿದ್ದು ಈ ಪೈಕಿ ಕೆಲವೊಂದು ಗಬ್ಬದ ಆಕಳುಗಳು ಇದ್ದು ಮುಂದಿನ ವರ್ಷ ಸಂಖ್ಯೆ ಇನ್ನಷ್ಟು ವೃದ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಗೋ ಶಾಲೆಗೊಂದು ಸುಸಜ್ಜಿತ ಕಟ್ಟಡ ಅನಿವಾರ್ಯವಾಗಿದ್ದು ದಾನಿಗಳ ನೆರವಿನ ನಿರೀಕ್ಷೆಯೊಂದಿಗೆ ಬ್ಯಾಂಕ್ ಸಾಲ ಪಡೆದು ಪುರಾಣಿಕ ದಂಪತಿ ೧೬ ಲಕ್ಷ ಅಂದಾಜು ವೆಚ್ಚದ ಕಟ್ಟಡ ನಿರ್ಮಾಣ ಆರಂಭಿಸಿದ್ದು ಅರ್ಧಾಂಶ ನಿರ್ಮಾಣ ಹಂತ ತಲುಪಿದೆ.
ಗೋ ಪ್ರೀತಿ ಮತ್ತು ಈ ಅಪರೂಪದ ನಿಸ್ಪೃಹ, ಪ್ರಾಮಾಣಿಕ ಗೋ ಸೇವೆ ಯಾರೂ ಬೇಕಾದರೂ ಬಂದು ನೋಡಲು ಮುಕ್ತ ಅವಕಾಶವಿದೆ. ಯಾವುದೇ ಪೂರಕ ಸೌಲಭ್ಯಗಳಿಲ್ಲದೆ ನಗರದ ಮಧ್ಯೆ ಇದ್ದು ಗೋ ಸಂವರ್ಧನೆ ಮತ್ತು ದೇಸೀ ಗೋವುಗಳ ರಕ್ಷಣೆಗೆ ಕಟಿಬದ್ಧವಾಗಿರುವ ಅಪರೂಪದ ಈ ಪ್ರಯತ್ನಕ್ಕೆ ಸ್ವಯಂ ಪ್ರೇರಣೆಯಿಂದ ದಾನ, ದೇಣಿಗೆ ನೀಡಿದರೆ ದಾನ ಸಾರ್ಥವೆನಿಸುವುದರಲ್ಲಿ ಸಂದೇಹವಿಲ್ಲ.
ಗೋ ಶಾಲೆಗೆ ನೆರವು ನೀಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಪಾವತಿಸಬಹುದು.
ಸಿಂಡಿಕೇಟ್ ಬ್ಯಾಂಕ್ ಕಾರ್ಕಳ SYNB0000114
ACCOUNT NUMBER – 01142600001457