ಉಡುಪಿ : ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದ್ದು, ಇದರಲ್ಲಿ ಯಾವುದೇ ರೀತಿಯ ಲೋಪವಾದರೆ ಸಂಬಂದಪಟ್ಟವರ ವಿರುದ್ದ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಎಚ್ಚರಿಸಿದ್ದಾರೆ.
ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತಗಟ್ಟೆ ಸೌಲಭ್ಯ ಕುರಿತು ನಗರ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಓಗಳ ಸಭೆ ನಡೆಸಿ ಮಾತನಾಡಿದರು.
ಪ್ರತಿಯೊಂದು ಮತಗಟ್ಟೆಯಲ್ಲಿ ಕುಡಿಯುವ ನೀರಿನ ಸೌಲಭ್ಯ, ರ್ಯಾಂಪ್, ಪೀಠೋಪಕರಣ, ಮೆಡಿಕಲ್ ಕಿಟ್, ವಿದ್ಯುತ್ ಸೌಲಭ್ಯ, ಮತದಾರರಿಗೆ ಹೆಲ್ಫ್ ಡೆಸ್ಕ್ ಸೌಲಭ್ಯಗಳನ್ನು ಒದಗಿಸಬೇಕು. ಇದರಲ್ಲಿ ಯಾವುದೇ ಕೊರತೆಯಾಗದಂತೆ ಗಮನಹರಿಸಬೇಕು, ಚುನಾವಣೆ ದಿನ ಇದರಲ್ಲಿ ಯಾವುದೇ ಲೋಪವಾದರೆ ಸಂಬಂದಪಟ್ಟ ಪಿಡಿಓ, ಮುಖ್ಯಾಧಿಕಾರಿ ವಿರುದ್ದ ಶಿಸ್ತು ಕ್ರಮ ಜರುಗಿಸುವುದಾಗಿ ಸಿಇಓ ಹೇಳಿದರು.
ವಿಕಲಚೇತರು ಹಾಗೂ ಹಿರಿಯ ನಾಗರೀಕರನ್ನು ಮತಗಟ್ಟೆಗೆ ಕರೆತರಲು ವಾಹನ ಸೌಲಭ್ಯ ಹಾಗೂ ವೀಲ್ ಚೇರ್ ವ್ಯವಸ್ಥೆ ಸಿದ್ದವಾಗಿಟ್ಟುಕೊಳ್ಳಬೇಕು, ರಾಜಕೀಯ ವ್ಯಕ್ತಿಗಳಿಗೆ ಸಂಬಂದಿಸಿದ ವಾಹನಗಳಲ್ಲಿ ಅವರನ್ನು ಕರೆ ತಂದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಈ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣವೇ ಸಿದ್ದತೆ ಮಾಡಿಟ್ಟುಕೊಳ್ಳಬೇಕು ಎಂದು ಸಿಇಓ ಹೇಳಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.