ಆಗಸ್ಟ್ 4ರಿಂದ ಮಂಗಳೂರು – ಹೊಸದಿಲ್ಲಿ ಮಧ್ಯೆ ಮತ್ತೆ ವಿಮಾನ ಯಾನ ಆರಂಭ

ಮಂಗಳೂರು: ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ಸಂಪರ್ಕ ಕಲ್ಪಿಸುವ ಸ್ಪೈಸ್‌ ಜೆಟ್ ಆಗಸ್ಟ್ 4ರಿಂದ‌ ಆರಂಭಗೊಳ್ಳಲಿದೆ. ಕೆಲ ತಿಂಗಳಿನಿಂದ ಮಂಗಳೂರು-ಹೊಸದಿಲ್ಲಿ ನೇರ ವಿಮಾನ ಸ್ಥಗಿತಗೊಂಡಿತ್ತು.
ಬೆಳಗ್ಗೆ 6.15ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನ ಬೆಳಗ್ಗೆ 8.55ಕ್ಕೆ ಹೊಸದಿಲ್ಲಿ ತಲುಪಲಿದೆ. ಪ್ರತಿದಿನ ರಾತ್ರಿ 8.30ಕ್ಕೆ ಹೊಸದಿಲ್ಲಿಯಿಂದ ಹೊರಡುವ ವಿಮಾನ ರಾತ್ರಿ 11.15ಕ್ಕೆ ಮಂಗಳೂರು ತಲುಪಲಿದೆ.
ಈ ಹಿಂದೆ ಹೊಸದಿಲ್ಲಿಗೆ ಮಂಗಳೂರಿನಿಂದ ಒಂದು ಜೆಟ್ ಏರ್‌ವೇಸ್‌ ಸಂಚರಿಸುತ್ತಿತ್ತು. ಕೆಲವು ತಿಂಗಳಿನಿಂದ ಆ ವಿಮಾನವೂ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು.‌
ಹೀಗಾಗಿ‌ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆ ಇರಲಿಲ್ಲ. ದಿಲ್ಲಿಗೆ ಬೆಂಗಳೂರು ಅಥವಾ ಮುಂಬೈ ಮೂಲಕ ತೆರಳಬೇಕಿತ್ತು.
ಹೊಸದಿಲ್ಲಿಗೆ ನೇರವಿಮಾನ ಸೇವೆ ಮರು ಆರಂಭಿಸುವ ಸಂಬಂಧ ಸಂಸದ ನಳಿನ್‌ ಕುಮಾರ್‌ ಕಟೀಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಹೀಗಾಗಿ‌ ಸ್ಪೈಸ್‌ಜೆಟ್ ಮಂಗಳೂರು-ಹೊಸದಿಲ್ಲಿ ವಿಮಾನ ಸೇವೆಯನ್ನು ಆರಂಭಿಸಲಿದೆ.