ಜಾನುವಾರು ಕಳವುಗೈದು ಕಾರಿನಲ್ಲಿ ಸಾಗಾಟ, ಕಾರು ಅಪಘಾತಕ್ಕೀಡಾಗಿ‌ 5 ಹಸುಗಳು ಸಾವು

ಮಂಗಳೂರು: ಹಸುಗಳನ್ನು ಕಳವುಗೈದು ಸಾಗಾಟ ಮಾಡುತ್ತಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಐದು ಜಾನುವಾರುಗಳು ಸಾವನ್ನಪ್ಪಿರುವ ದಾರುಣ‌ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಮುಂಡಾಜೆ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಕಳ್ಳರು ಐಷಾರಾಮಿ ಕಾರಿನಲ್ಲಿ ಆರು ಹಸುಗಳನ್ನು ಅಮಾನವೀಯ ರೀತಿಯಲ್ಲಿ ತುಂಬಿಸಿಕೊಂಡು ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ಪರಿಣಾಮ ಕಾರಿನಲ್ಲಿದ್ದ ಐದು ಹಸುಗಳು ಸಾವನ್ನಪ್ಪಿದ್ದು, ಹಸುವೊಂದರ ಸ್ಥಿತಿ ಗಂಭೀರವಾಗಿದೆ.
ಒಂದು ಕಾರಿನಲ್ಲಿ ಆರು ಹಸುಗಳನ್ನು ತುಂಬಿಕೊಂಡು ತೆರಳಿದ್ದು, ಕಾರಿನ ಹಿಂದಿನ ಸೀಟ್‍ಗಳನ್ನು ತೆಗೆದು ಹಸುಗಳನ್ನು ತುಂಬಿದ್ದರು. ಹೊರಭಾಗಕ್ಕೆ ಕಾಣತೆ ಕಾರಿನ ಗ್ಲಾಸ್ ಗೆ ಟಿಂಟ್ ಅಳವಡಿಸಲಾಗಿತ್ತು.
ಹೀಗಾಗಿ ಯಾರಿಗೂ ಗೊತ್ತಾಗದಂತೆ ಎರಡು ಚೆಕ್ ಪೋಸ್ಟ್ ದಾಟಿ ತೆರಳಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕೂಡ ಚೆಕ್ ಮಾಡಿಲ್ಲ. 
ಅಪಘಾತವಾದ ತಕ್ಷಣ ಕಾರು ಮತ್ತು ಗೋವುಗಳನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಇದರಿಂದಾಗಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಘಟನಾ‌ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು, ಅಮಾನವೀಯ ಕೃತ್ಯದ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಇತ್ತೀಚೆಗೆ ಮತ್ತೆ ಗೋಕಳ್ಳತನ ಪ್ರಕರಣಗಳ ಹೆಚ್ಚಾಗುತ್ತಿದೆ. ಇಂಥ‌ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂದು ಅಗ್ರಹಿಸಿದ್ದಾರೆ.