ದಲಿತ ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನಕ್ಕೆ ಅಂಬೇಡ್ಕರ್ ಯುವಸೇನೆ ಆಗ್ರಹ

ಉಡುಪಿ: ದಲಿತ ಯುವತಿಯೊಬ್ಬಳನ್ನು ಮದುವೆ ಆಗುತ್ತೇನೆಂದು ನಂಬಿಸಿ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿರುವ ಆರೋಪಿ ಕರಂಬಳ್ಳಿಯ ಅಕ್ಷಯ ಶೆಟ್ಟಿ(23) ಎಂಬಾತನನ್ನು ಕೂಡಲೇ ಬಂಧಿಸಬೇಕೆಂದು ಉಡುಪಿ ಅಂಬೇಡ್ಕರ್ ಯುವಸೇನೆ ಆಗ್ರಹಿಸಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಯುವ ಸೇನೆಯ ಗೌರವಾ ಧ್ಯಕ್ಷ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಅಕ್ಷಯ ಒಂದೂವರೆ ವರ್ಷಗಳ ಹಿಂದೆ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಆಕೆಯ ಸ್ನೇಹವನ್ನು ದುರುಪಯೋಗಪಡಿಸಿಕೊಂಡ 2019ರ ಅಕ್ಟೋಬರ್ 1ರಂದು ತನ್ನ ಮನೆಗೆ ಕರೆಸಿ, ಅಮಲು ಬರುವ ಪದಾರ್ಥ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಮದುವೆಯಾಗುವುದಾಗಿ ನಂಬಿಸಿದ ಆಕೆಯೊಂದಿಗೆ ಅನೋನ್ಯವಾಗಿದ್ದನು. ಇದರ ಪರಿಣಾಮ ಆಕೆ ಗರ್ಭವತಿಯಾಗಿದ್ದು, ಬಳಿಕ ಆತ ಆಕೆಗೆ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದನು. ಬಂತರ ಆಕೆಯಿಂದ ಆತ ದೂರ ಆಗಲು ಪ್ರಯತ್ನಿಸಿದ್ದನು ಎಂದು ದೂರಿದರು.

ಯುವತಿಯ ದೂರಿನ ಹಿನ್ನೆಲೆಯಲ್ಲಿ 2020 ಮೇ 26ರಂದು ಮಹಿಳಾ ಠಾಣೆಯಲ್ಲಿ ಮದುವೆಯಾಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದನು. ಆದರೆ ಅದರ ಬಳಿಕ ಜೂನ್ 5ರಂದು ಆಕೆಯ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದನು. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಅಕ್ಷಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಪೊಲೀಸರು ಆರೋಪಿಯನ್ನು ಈವರೆಗೆ ಬಂಧಿಸಿಲ್ಲ. ಮುಂದಿನ ಒಂದು ವಾರದೊಳಗೆ ಆರೋಪಿಯನ್ನು ಬಂಧಿಸಬೇಕು. ಇಲ್ಲದಿದ್ದರೆ ಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ಯುವಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್, ಗುಣವಂತ ಪಾಲನ್ ತೊಟ್ಟಂ, ಮಂಜುನಾಥ ಕಪ್ಪೆಟ್ಟು, ಸುಮಿತ್ ರಾಜ್ ನೆರ್ಗಿ ಇದ್ದರು.