ಫೋನ್‌ ಕದ್ದಾಲಿಕೆ ಯಾರು ಮಾಡಿದರೂ ಅದು ತಪ್ಪು: ಶೋಭಾ ಕರಂದ್ಲಾಜೆ

ಉಡುಪಿ: ಫೋನ್‌ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅದರ ಸತ್ಯಾಂಶ ಹೊರಬರಬೇಕು. ಅದು ಯಾರು‌ ಮಾಡಿದರೂ‌ ತಪ್ಪು. ಆದರೆ ಯಾರೂ ತಪ್ಪು ಮಾಡದಿದ್ದರೆ ಅಪರಾಧಿ ಭಾವನೆ ಹೊಂದುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಏನೂ ತಪ್ಪು ಮಾಡದಿದ್ದರೆ ಅವರು ಭಯಪಡುವ ಅಗತ್ಯವಿಲ್ಲ. ಅವರು ಖುಷಿಯಾಗಿ
ಇರಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪೋನ್‌ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ‌ ಅಪೇಕ್ಷೆ ಇತ್ತು. ಅದರಂತೆ ಸರ್ಕಾರ ತನಿಖೆಗೆ ಆದೇಶಿಸಿದೆ. ಯಾರು ಹೇಗೆ ತನಿಖೆ ಮಾಡುತ್ತಾರೆ ಎಂಬುವುದು ಶೀಘ್ರ ತಿಳಿಯಲಿದೆ. ತಪ್ಪಿತಸ್ಥರನ್ನು ಹೊರತರುವುದು ಈ ತನಿಖೆಯ ಉದ್ದೇಶ. ಆದರೆ ಯಾರೂ ತಪ್ಪು ಮಾಡದಿದ್ದರೆ ಇಡೀ ರಾಜ್ಯವೇ ಖುಷಿ ಪಡುತ್ತದೆ ಎಂದರು.

ನನ್ನ ಫೋನ್‌‌ ಕದ್ದಾಲಿಕೆ ಆದರೆ ಯಾವುದೇ ಸಮಸ್ಯೆಯಿಲ್ಲ:
ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆಯಲ್ಲಿ ಶಾಮೀಲಾಗಿದ್ದರೆ ಎಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ನನ್ನದೇ ಕೆಲಸದಲ್ಲಿ ನಿರತಳಾಗಿದ್ದೇನೆ. ನೆರೆ ಪ್ರವಾಸ, ಸಂಸತ್ತಿನ ಓಡಾಟದಲ್ಲಿದ್ದೇನೆ. ಹಾಗಾಗಿ ಇದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಫೋನ್‌‌ ಕದ್ದಾಲಿಕೆ ಆದರೆ ಯಾವುದೇ ಸಮಸ್ಯೆಯಿಲ್ಲ. ನಾನು ಯಾವುದೇ ಸಮಾಜ ದ್ರೋಹ, ದೇಶ ದ್ರೋಹದ ಕೆಲಸ ತೊಡಗಿಕೊಂಡಿಲ್ಲ ಎಂದರು.

ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿಎಂ ಸಚಿವ ಆಕಾಂಕ್ಷಿಗಳ ಪಟ್ಟಿ ತಯಾರಿಸಿ ಹೈಕಮಾಂಡ್‌ಗೆ ನೀಡಿದ್ದಾರೆ. ಯಾರು ಸಚಿವರಾಗ್ತಾರೆ, ಆಗಲ್ಲ ಎಂಬುವುದನ್ನು ಸಿಎಂ ಹಾಗೂ ಹೈಕಮಾಂಡ್‌ ನಿರ್ಧಾರ ಮಾಡಲಿದೆ. ಪ್ರಮಾಣವಚನದೊಳಗೆ ಪಟ್ಟಿ‌ ಹೊರಬರಲಿದೆ.
ನೆರೆ ಪರಿಹಾರ ಆಧ್ಯಯನ ತಂಡ ಯಾವಾಗ ಬೇಕಾದರೂ ಬರಬಹುದು. ಗೃಹ ಸಚಿವರು, ಹಣಕಾಸು ಸಚಿವರು ಬಂದು ಹೋಗಿದ್ದಾರೆ ಎಂದವರು ತಿಳಿಸಿದರು.