ಮಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಮಂಗಳೂರು ತಾಲೂಕಿನ ವಿವಿಧ ಹಾಸ್ಟೆಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಿ. ದೇವರಾಜು ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯ ಉಳ್ಳಾಲ, ದೇರಳಕಟ್ಟೆ ಇಲ್ಲಿಗೆ ಭೇಟಿ ನೀಡಿದ ಅವರು ಸಮಗ್ರವಾಗಿ ವೀಕ್ಷಿಸಿದರು. ಅಡುಗೆಕೋಣೆ, ಸ್ನಾನಗೃಹ, ವಾಚನಾಲಯ, ಕೊಠಡಿಗಳನ್ನು ಪರಿಶೀಲಿಸಿದ ಲೋಕಾಯುಕ್ತರು, ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಹಾಸ್ಟೆಲ್ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಲೋಕಾಯುಕ್ತ ನಿರೀಕ್ಷಕಿ ಭಾರತಿ ಜಿ., ನಿಲಯ ಪಾಲಕ ಕೃಷ್ಣರಾಜ್ ಉಪಸ್ಥಿತರಿದ್ದರು.