ಗಂಗೊಳ್ಳಿ ಪೇಟೆಯಲ್ಲಿ ಶಾರ್ಟ್ ಸರ್ಕ್ಯೂಟ್:ಎರಡು ಅಂಗಡಿಗಳು ಸಂಪೂರ್ಣ ಭಸ್ಮ

ಕುಂದಾಪುರ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋದ ಘಟನೆ ಮಂಗಳವಾರ ನಸುಕಿನ ಜಾವ ಗಂಗೊಳ್ಳಿ ಪೇಟೆಯಲ್ಲಿ ನಡೆದಿದೆ.
ಪೇಟೆಯ ನೀರಿನ ಟ್ಯಾಂಕ್ ಬಳಿಯಿರುವ ಜಿ. ದಿನೇಶ್ ನಾಯಕ್ ಹಾಗೂ ಜಿ. ಪದ್ಮನಾಭ್ ನಾಯಕ್ ಅವರ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು,  ಎರಡೂ ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದೆ. ಸುಮಾರು 20 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಂಗಳವಾರಪ ಬೆಳಗ್ಗಿನ ಜಾವ 3 ಸುಮಾರಿಗೆ ದುರ್ಘಟನೆ ನಡೆದಿದ್ದು, 3.40 ರ ಸುಮಾರಿಗೆ ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿ, ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.
ಕಾರ್ಯಾಚರಣೆಯಲ್ಲಿ ಕುಂದಾಪುರ ಅಗ್ನಿ ಶಾಮಕ ಠಾಣಾಧಿಕಾರಿ ಕೆ.ಎನ್. ಮೊಗೇರ, ಸಿಬಂದಿಯಾದ ಕೆ.ಟಿ. ಗೌಡ, ನಾಗರಾಜ ಪೂಜಾರಿ, ಮಂಜುನಾಥ್ ಪೂಜಾರಿ, ಆನಂದ ಭಾಗಿಯಾಗಿದ್ದರು. ಗಂಗೊಳ್ಳಿ ಎಸ್ಐ ಭೀಮಾಶಂಕರ, ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಆಪತ್ಭಾಂದವ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಸೇರಿದಂತೆ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.