ಉಡುಪಿ: ಕಾರಿಗೆ ಸೈಡ್ ಕೊಡದ ವಿಚಾರಕ್ಕೆ ಸಂಬಂಧಿಸಿ ತೀರ್ಥಹಳ್ಳಿ ತಾಲ್ಲೂಕಿನ ಮಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಗದ್ದೆ ಎಂಬಲ್ಲಿ ಖಾಸಗಿ ಬಸ್ ನ ನಿರ್ವಾಹಕರೊಬ್ಬರಿಗೆ ಎಂಟು ಮಂದಿಯ ತಂಡ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಜೂನ್ 30ರಂದು ಸಂಜೆ 6.30ರ ಸುಮಾರಿಗೆ ನಡೆದಿದ್ದು, ಬಸ್ ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಹಲ್ಲೆಯಿಂದ ತೀವ್ರಗಾಯಗೊಂಡಿರುವ ಬಸ್ ನಿರ್ವಾಹಕ ಮಂಡಗದ್ದೆಯ ಗಣೇಶ್ ಮಾಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಾಗಿತ್ತು?
ಉಡುಪಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ನಿಶಾನ್ ಎಂಬ ಖಾಸಗಿ ಬಸ್ ಹೆಬ್ರಿಯ ಸೀತಾನದಿ ಎಂಬಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ನಿಶ್ಮಿತಾ ಬಸ್ ಅನ್ನು ಓವರ್ ಟೇಕ್ ಮಾಡಿತ್ತು ಎನ್ನಲಾಗಿದೆ. ಈ ವೇಳೆ ಎದುರಿನಿಂದ ಆಗುಂಬೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಾರಿನಲ್ಲಿದ್ದವರು ಸೈಡ್ ಕೊಟ್ಟಿಲ್ಲ ಎಂಬ ಆರೋಪ ಹೊರಿಸಿ ಬಸ್ ಅನ್ನು ಅಡ್ಡಗಟ್ಟಿ ನಿಲ್ಲಿಸಿದರು ತಿಳಿದುಬಂದಿದೆ. ಈ ವಿಚಾರದಲ್ಲಿ ಕಾರಿನಲ್ಲಿದ್ದ ನಾಲ್ವರು ಜಗಳಕ್ಕಿಳಿದರು.
ಮದ್ಯಸೇವಿಸಿದ ಇವರ ವಿರುದ್ಧ ತಿರುಗಿಬಿದ್ದ ಸ್ಥಳೀಯರು ಚೆನ್ನಾಗಿ ಥಳಿಸಿದರು. ಅಲ್ಲಿಂದ ಹೆಬ್ರಿ ಕಡೆಗೆ ಹೋದ ಕಾರಿನಲ್ಲಿದ್ದವರು ಇನ್ನೊಂದು ಕಾರಿನಲ್ಲಿ ಮತ್ತೆ ನಾಲ್ವರನ್ನು ಸೇರಿಸಿಕೊಂಡು ಹಿಂತಿರುಗಿ ಬಸ್ ಅನ್ನು ಹಿಂಬಾಲಿಸಿಕೊಂಡು ಬಂದರು. ಮಂಡಗದ್ದೆಯಲ್ಲಿ ಹೋಗುತ್ತಿದ್ದ ನಿಶಾನ್ ಬಸ್ ಅನ್ನು ಅಡ್ಡಗಟ್ಟಿ ನಿರ್ವಾಹಕನಿಗೆ ಹಲ್ಲೆ ನಡೆಸಿ ಆತನಿಂದ 20 ಸಾವಿರ ನಗದು ದೋಚಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ಪರ್ಕಳದವರೆಂಬ ಮಾಹಿತಿ ಲಭ್ಯವಾಗಿದೆ.