ಕುಂದಾಪುರ: ಮೂರು ದಿನಗಳ ಹಿಂದೆಷ್ಟೇ ವರ್ಗಾವಣೆಗೊಂಡಿದ್ದ ನಿರ್ಗಮಿತ ಕುಂದಾಪುರ ಉಪವಿಭಾಗಾಧಿಕಾರಿ ಡಾ. ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿಗೃಹದ ಮೇಲೆ ಗುರುವಾರ ಮಧ್ಯಾಹ್ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವರ್ಗಾವಣೆಗೊಂಡ ಬಳಿಕವೂ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ಡಿವೈಎಸ್ಪಿ ಮಂಜುನಾಥ್ ಕವರಿ ನೇತೃತ್ವದ ಎಸಿಬಿ ತಂಡ ದಾಳಿ ನಡೆಸಿದೆ. ದಾಳಿಯ ವೇಳೆಯಲ್ಲಿ ಸಿಕ್ಕ 3,08,000 ರೂ ನಗದು ಹಾಗೂ 23 ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಸರ್ಕಾರಿ ಕಡತಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಡಾ. ಮಧುಕೇಶ್ವರ್ ಅವರು ಮಂಗಳವಾರವಷ್ಟೇ ಕುಂದಾಪುರ ಉಪವಿಭಾಗದಿಂದ ವರ್ಗಾವಣೆಗೊಂಡಿದ್ದರು. ಆದರೆ ಅವರಿಗೆ ಯಾವ ಹುದ್ದೆಯೂ ನಿಗಧಿಯಾಗಿರಲಿಲ್ಲ. ನೂತನ ಉಪವಿಭಾಗಾಧಿಕಾರಿ ರಾಜೀವ.ಕೆ ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರಿಸಿದ್ದರು. ಆಧಿಕಾರ ಹಸ್ತಾಂತರ ಮಾಡಿದ ಬಳಿಕವೂ ಉಪವಿಭಾಗಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಮಿನಿ ವಿಧಾನಸೌಧಕ್ಕೆ ಸಮೀಪದಲ್ಲಿ ಇರುವ ಉಪವಿಭಾಗಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ವಿಲೆವಾರಿ ಮಾಡುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.
ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿಯಾಗಿ ಕಳೆದ ಆರು ತಿಂಗಳ ಹಿಂದೆಷ್ಟೇ ಕುಂದಾಪುರದ ಸಹಾಯಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಡಾ. ಮಧುಕೇಶ್ವರ್ ಪ್ರತಿಯೊಂದು ಕಡತ ವಿಲೇವಾರಿಗೂ ಲಂಚ ಪಡೆಯುತ್ತಾರೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬಂದಿತ್ತು.
ಗುರುವಾರ ರಾತ್ರಿ ಬೆಂಗಳೂರಿಗೆ ತೆರಳಲು ಡಾ.ಮಧುಕೇಶ್ವರ್ ಅವರು ವಿಮಾನದ ಟಿಕೇಟ್ ಅನ್ನು ಕಾಯ್ದಿರಿಸಿದ್ದರು. ಎಸಿಬಿ ದಾಳಿ ಹಿನ್ನೆಲೆ ಅಧಿಕಾರಿಗಳು ಕಾಯ್ದಿರಿಸಿದ ಟಿಕೇಟ್ ಅನ್ನು ರದ್ದುಗೊಳಿಸಲು ಸೂಚನೆ ನೀಡಿದ್ದಾರೆ.
ಕುಂದಾಪುರದ ಇತಿಹಾಸದಲ್ಲೇ ಇದೆ ಮೊದಲು:
ಕುಂದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆ, ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಈ ಹಿಂದೆ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಗಳು ದಾಳಿ ನಡೆಸಿರುವ ಸಾಕಷ್ಟು ಪ್ರಕರಣಗಳು ಇದ್ದರೂ, ಉಪವಿಭಾಗ ವ್ಯಾಪ್ತಿಯ ಅಧಿಕಾರ ಹೊಂದಿದ್ದ ಹಿರಿಯ ಶ್ರೇಣಿಯ ಕೆಎಎಸ್ ಆಧಿಕಾರಿಯ ಮನೆ ಮೇಲೆ ದಾಳಿ ನಡೆದಿರುವುದು ಇದೆ ಮೊದಲ ಬಾರಿ ಎನ್ನಲಾಗುತ್ತಿದೆ.












