ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ದಾನಿಗಳು ಸೇವಾ ರೂಪವಾಗಿ ನೀಡಿದ ನೂತನ ಬ್ರಹ್ಮರಥವು ಸೋಮವಾರ ಪುರಪ್ರವೇಶಗೊಂಡಿದೆ. ಕೋಟೇಶ್ವರದ ಶ್ರೀ ಕಾಳಿಕಾಂಬಾ ಶಿಲ್ಪಕಲಾದಿಂದ ಹೊರಟ ವೈಭವದ ಪುರ ಮೆರವಣಿಗೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಮತ್ತಿತರ ಗಣ್ಯರು ಚಾಲನೆ ನೀಡಿದರು. ಕೋಟೇಶ್ವರದಿಂದ ನೀಲಾವರದವರೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಬ್ರಹ್ಮರಥಕ್ಕೆ ವಿಶೇಷ ಪೂಜೆ ಜರಗಿತು.
ನೀಲಾವರ ಕ್ರಾಸ್ ನಿಂದ ಕಾಲ್ನಡಿಗೆಯಲ್ಲಿ ವಿವಿಧ ಭಜನಾ ತಂಡಗಳೊಂದಿಗೆ, ಚಂಡೆ ವಾದನಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ನೂತನ ಬ್ರಹ್ಮ ರಥವನ್ನು ತರಲಾಯಿತು.
ಶ್ರೀ ಕ್ಷೇತ್ರ ನೀಲಾವರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಬ್ರಹ್ಮರಥದ ಸೇವಾರ್ಥಿ, ನೀಲಾವರ ಮಕ್ಕಿತೋಟ ಮನೆ ಗೌರಿ ವಿಟ್ಠಲ್ ಶೆಟ್ಟಿ ಹಾಗೂ ಮನೆಯವರು, ಹಿರಿಯರು, ಸಮಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅನೂಪ್ ಕುಮಾರ್ ಶೆಟ್ಟಿ, ಹೇಮಾ ವಿ. ಬಾಸ್ರಿ, ಕೆ. ತಮ್ಮಯ್ಯ ನಾಯ್ಕ್, ರುದ್ರದೇವಾಡಿಗ, ಜಯಂತಿ ಮೆಂಡನ್, ವಿವಿಧ ದೇವಸ್ಥಾನಗಳ ಮುಖ್ಯಸ್ಥರು, ಸಂಘ-ಸಂಸ್ಥೆಗಳ ಪ್ರಮುಖರು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.
ಈ ಪ್ರಯುಕ್ತ ಮಾ. 13 ರಂದು ಶೃಂಗೇರಿ ಶೀಗಳ ಆಶೀರ್ವಾದದೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲೋಕಾಪಣೆ ಮತ್ತು ವಿಶೇಷ ರಥೋತ್ಸವ ನಡೆಯಲಿದೆ.