ಇನ್ಮುಂದೆ ‘ಪೇಪಾಲ್’ ಮೂಲಕ ಯುಪಿಐ ಬಳಸಿ ವಿದೇಶಗಳಲ್ಲಿ ಶಾಪಿಂಗ್.!

ನವದೆಹಲಿ: ಭಾರತೀಯ ಬಳಕೆದಾರರು ಈಗ ಪೇಪಾಲ್ ಮೂಲಕ ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್ (ಯುಪಿಐ) ಬಳಸಿಕೊಂಡು ವಿದೇಶಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವಂತಹ ವ್ಯವಸ್ಥೆ ಜಾರಿಗೆ ಬರಲಿದೆ.

ಜಾಗತಿಕ ಪಾವತಿ ಕಂಪನಿಯಾದ ಪೇಪಾಲ್ ತನ್ನ ಹೊಸ ವೇದಿಕೆ ಪೇಪಾಲ್ ವರ್ಲ್ಡ್ ಪ್ರಾರಂಭಿಸಿದ್ದು, ವಿಶ್ವದ ಅತಿದೊಡ್ಡ ಪೇಮೆಂಟ್ ವ್ಯವಸ್ಥೆಗಳು ಮತ್ತು ಡಿಜಿಟಲ್ ವ್ಯಾಲೆಟ್​ಗಳನ್ನು ಪರಸ್ಪರ ಸಂರ್ಪಸುವ ಗುರಿ ಹೊಂದಿದೆ. ಇದರಲ್ಲಿ ಯುಪಿಐ ಕೂಡ ಸೇರಿದೆ. ಭಾರತೀಯ ಗ್ರಾಹಕರು ಈಗ ಅಂತಾರಾಷ್ಟ್ರೀಯ ವ್ಯಾಪಾರಿಗಳಿಂದ ಶಾಪಿಂಗ್ ಮಾಡಲು ಯುಪಿಐ ಬಳಸಬಹುದು.

ಉದಾಹರಣೆಗೆ, ಅಮೆರಿಕದ ಆನ್​ಲೈನ್ ಸ್ಟೋರ್​ನಲ್ಲಿ ವಸ್ತುಗಳನ್ನು ಖರೀದಿಸಲು ಬಯಸುವ ಭಾರತೀಯ ಬಳಕೆದಾರರು ಚೆಕ್​ಔಟ್​ನಲ್ಲಿ ಪೇಪಾಲ್ ಆಯ್ಕೆ ಕ್ಲಿಕ್ ಮಾಡಿದ ನಂತರ ಯುಪಿಐ ಬಟನ್ ಕಾಣಿಸುತ್ತದೆ. ಅದರ ಮೂಲಕ ದೇಶೀಯ ಪಾವತಿಗಳಂತೆಯೇ ಹಣ ಪಾವತಿಸಬಹುದು ಎಂದು ಪೇಪಾಲ್ ವ್ಯವಸ್ಥಾಪಕ ನಿರ್ದೇಶಕ ರಿತೇಶ್ ಶುಕ್ಲಾ ತಿಳಿಸಿದ್ದಾರೆ.