ಹೊಸದಿಲ್ಲಿ:ಮೇ ತಿಂಗಳಲ್ಲಿ ಬಿಸಿಲ ಬೇಗೆ, ಮಳೆ ಎರಡೂ ಅಧಿಕ!

ಹೊಸದಿಲ್ಲಿ: ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಗಾಳಿ ಬೀಸುವ ದಿನಗಳಿಗೆ ವಾಯವ್ಯ, ಕೇಂದ್ರ ಮತ್ತು ಪಕ್ಕದ ಪೂರ್ವಭಾರತ ಸಾಕ್ಷಿಯಾಗಲಿದೆ ಎಂದು ಪ್ರಕಟಿಸಿದೆ.

ರಾಜಸ್ಥಾನ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗಾನದಿ ತೀರ, ಗುಜರಾತ್, ಒಡಿಶಾ, ಛತ್ತೀಸ್ಗಢ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.ವಾಯವ್ಯ ಭಾರತ, ಇಂಡೋ-ಗಂಗಾಬಯಲು ಪ್ರದೇಶ ಮತ್ತು ದೆಹಲಿಯಲ್ಲಿ ಮಳೆ ಒಂದಷ್ಟು ತಂಪೆರೆದರೂ, 2-7 ಉಷ್ಣಗಾಳಿ ದಿನಗಳನ್ನು ಎದುರಿಸಲಿವೆ ಎಂದು ಹೇಳಿದೆ. ಮೇ ತಿಂಗಳ ತಾಪಮಾನ ಮತ್ತು ಮಳೆ ಸಾಧ್ಯತೆ ವರದಿಯನ್ನು ಬಿಡುಗಡೆ ಮಾಡಿದ ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮಹೋಪಾತ್ರ, ಪದೇ ಪದೇ ತೀವ್ರವಾದ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಮಳೆ ಪ್ರಮಾಣ ವಾಡಿಕೆಗಿಂತ ಅಧಿಕವಾಗಿರುತ್ತದೆ. 2024ರ ಮೇ ತಿಂಗಳಂತೆ ಈ ಬಾರಿಯೂ ಮಳೆ ಒಂದಷ್ಟು ತಂಪೆರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಪರ್ಯಾಯ ದ್ವೀಪ ಪ್ರದೇಶ ಮತ್ತು ಪೂರ್ವ ಭಾರತದ ಕೆಲ ಭಾಗ ಹೊರತುಪಡಿಸಿದರೆ ದೇಶದ ಬಹುತೇಕ ಕಡೆಗಳ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳಲ್ಲಿ ಏರಿಕೆ ಕಂಡುಬರಲಿದೆ. ದೇಶಾದ್ಯಂತ ಮೇ ತಿಂಗಳಲ್ಲಿ ಮಳೆಯ ನಿರೀಕ್ಷೆ ಇದ್ದು, ಮಳೆ ಪ್ರಮಾಣ ವಾಡಿಕೆಗಿಂತ ಅಧಿಕವಾಗಿರುತ್ತದೆ ಎಂದು ವಿವರಿಸಿದ್ದಾರೆ.