ಹೊಸದಿಲ್ಲಿ:’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ,ಇಂದು ಸರ್ವಪಕ್ಷ ಸಭೆಗೆ ಕರೆ

ಹೊಸದಿಲ್ಲಿ: “ಆಪರೇಷನ್‌ ಸಿಂದೂರ’ ನಡೆಸಿ ಪಾಕಿಸ್ಥಾನದ ಮೇಲೆ “ಉಗ್ರ ಪ್ರತೀಕಾರ’ ತೀರಿಸಿ­ಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ, ಇನ್ನಷ್ಟು ದಾಳಿ ನಡೆಸಲಿದೆಯೇ?ಇಂತಹದೊಂದು ಕುತೂಹಲಕ್ಕೆ ಕಾರಣವಾಗಿರುವುದು ಸ್ವತಃ ಮೋದಿ ನಡೆಸುತ್ತಿರುವ ಸರಣಿ ಸಭೆಗಳು ಹಾಗೂ ಮೋದಿ ಪ್ರಭಾ ವಲಯ ದಲ್ಲಿರುವ ಜನಪ್ರತಿನಿಧಿ ಹಾಗೂ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಗಳು.

ಮಂಗಳವಾರ ತಡರಾತ್ರಿಯ ದಾಳಿ ಬೆನ್ನಲ್ಲೇ ಬುಧವಾರ ತಮ್ಮ ಸಂಪುಟ ಸಭೆ ನಡೆಸಿರುವ ಮೋದಿ, ಗುರುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ದಾಳಿ ಕುರಿತ ವಿವರ ನೀಡಲು ಈ ಸಭೆ ಕರೆಯಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಮುಂದಿನ ಹೆಜ್ಜೆಯ ಕುರಿತು ಚರ್ಚಿಸುವ ಸಾಧ್ಯತೆ ಇಲ್ಲದಿಲ್ಲ. ಅದೂ ಅಲ್ಲದೆ, ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ಈಗಾಗಲೇ ಬಹುತೇಕ ವಿಪಕ್ಷಗಳು ಘೋಷಿಸಿವೆ.

ಏತನ್ಮಧ್ಯೆ, ಭಾರತೀಯ ಸೇನಾಪಡೆಯ ಮಾಜಿ ಮುಖ್ಯಸ್ಥ ಜಣಮನೋಜ್‌ ನರವಣೆ, ಮಹಾರಾಷ್ಟ್ರದ ಎನ್‌ಡಿಎ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿರುವ ಏಕನಾಥ್‌ ಶಿಂಧೆ ಸೇರಿದಂತೆ ಅನೇಕರು, “ಯೇ ತೋ ಅಭೀ ಟ್ರೈಲರ್‌ ಹೈ. ಪಿಕ್ಚರ್‌ ಅಭೀ ಬಾಕೀ ಹೈ’ (ಇದು ಕೇವಲ ಟ್ರೈಲರ್‌. ಸಿನಿಮಾ ಇನ್ನೂ ಬಾಕಿ ಇದೆ) ಎಂದಿದ್ದಾರೆ. ಇದೇ ವೇಳೆ, ಪಾಕಿಸ್ತಾನ ಪ್ರಧಾನಿ ತಮ್ಮ ಸೇನಾಪಡೆಗಳು ಯಾವುದೇ ನಿರ್ಧಾರ ಕೈಗೊಳ್ಳಲು ಮುಕ್ತ ಸ್ವಾತಂತ್ರ್ಯ ನೀಡಿರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ “ನಮ್ಮ ತಂಟೆಗೆ ಬಂದರೆ ತಕ್ಕ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದೆಲ್ಲವೂ “ಆಪರೇಷನ್‌ ಸಿಂದೂರ 2′ ನಡೆಯುವ ಬಗ್ಗೆ ಅತೀವ ಕುತೂಹಲ ಮೂಡಿಸಿದೆ.