ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತು ರಜನಿಕಾಂತ್ ಅಭಿನಯದ “ಕೂಲಿ”: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ “ಕೂಲಿ”

ನವದೆಹಲಿ: ರಜಿನಿಕಾಂತ್ ನಟನೆಯ ‘ಕೂಲಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಗಳಿಕೆ ಕಂಡಿದೆ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದು, ರಜಿನಿಕಾಂತ್ ಜೊತೆಗಿನ ಮೊದಲ ಸಹಯೋಗವಾಗಿದೆ. ಸೂಪರ್‌ಸ್ಟಾರ್ ಅವರ 171ನೇ ಚಿತ್ರವು ಎಲ್ಲ ಭಾಷೆಗಳಲ್ಲಿ 65 ಕೋಟಿ ರೂ.ಗಳನ್ನು ಗಳಿಸಿದೆ. ಈ ಮೂಲಕ ಹೃತಿಕ್ ರೋಷನ್-ಜೂನಿಯರ್ ಎನ್‌ಟಿಆರ್ ಅವರ ‘ವಾರ್ 2’ ಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ರಜಿನಿಕಾಂತ್ ನಟನೆಯ ಈ ಚಿತ್ರ ಅತಿ ಹೆಚ್ಚು ಗಳಿಕೆ ಕಂಡ ಅವರ ತಮಿಳು ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ತಮಿಳಿನಲ್ಲಿ ಬೆಳಗಿನ ಪ್ರದರ್ಶನಗಳಿಗೆ ಸುಮಾರು ಶೇ 81.95 ರಷ್ಟು ಜನರು ಭೇಟಿ ನೀಡಿದ್ದಾರೆ. ಮಧ್ಯಾಹ್ನದ ಪ್ರದರ್ಶನಗಳಲ್ಲಿ ಶೇ 85.13, ಸಂಜೆ ಪ್ರದರ್ಶನಗಳಲ್ಲಿ ಶೇ 86.57 ಮತ್ತು ರಾತ್ರಿ ಪ್ರದರ್ಶನಗಳಲ್ಲಿ ಶೇ 94.32 ರಷ್ಟು ಜನರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.

2.0 ಚಿತ್ರವನ್ನು ಹಿಂದಿಕ್ಕಿದ ಕೂಲಿ:
ರಜಿನಿಕಾಂತ್ ನಟನೆಯ ಚಿತ್ರ ಹಿಂದಿ ಚಿತ್ರಗಳ ಪಟ್ಟಿಯಲ್ಲಿಯೂ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಬೆಳಗಿನ ಪ್ರದರ್ಶನಗಳಲ್ಲಿ ಮುಂಬೈನಲ್ಲಿ ಶೇ 35ರಷ್ಟು ಜನರು ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಶೇ 41 ರಷ್ಟು ಜನರು ಮತ್ತು ಕೋಲ್ಕತ್ತಾದಲ್ಲಿ ಶೇ 41 ರಷ್ಟು ಜನರು ಚಿತ್ರಮಂದಿರಗಳಿಗೆ ಬಂದಿದ್ದರು. ಉದ್ಯಮ ವರದಿಗಳ ಪ್ರಕಾರ, ರಜಿನಿಕಾಂತ್ ಅವರ ಕೂಲಿ ಚಿತ್ರವು ಮೊದಲ ದಿನವೇ 60 ಕೋಟಿ ರೂ. ಗಳಿಸಿದ ಹಿಂದಿನ ಬ್ಲಾಕ್‌ಬಸ್ಟರ್ ಚಿತ್ರ 2.0 ಅನ್ನು ಹಿಂದಿಕ್ಕಿತು. ಆದ್ದರಿಂದ, ಕೂಲಿ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಅಧಿಕ ಗಳಿಕೆ ಕಂಡ ರಜನಿಕಾಂತ್ ಅವರ ಮೊದಲ ಚಿತ್ರ ಎಂದು ಹೇಳಲಾಗುತ್ತಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರವು ರಜನಿಕಾಂತ್ ಅವರ 171 ನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ನಾಗಾರ್ಜುನ, ಶ್ರುತಿ ಹಾಸನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಮೀರ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೂಲಿ ಚಿತ್ರವನ್ನು ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಿಸಿದೆ.