ಅಬುಧಾಬಿ:ಕಳೆದ ಎರಡು ಆವೃತ್ತಿಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಜಯ ದಾಖಲಿಸಿತ್ತು. ಅದರಲ್ಲೂ 2022ರ ಆವೃತ್ತಿಯ ಫೈನಲ್ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವನ್ನೇ ಮಣಿಸಿ ಡೆಕ್ಕನ್ ಚಾಂಪಿಯನ್ ಆಗಿತ್ತು. 2023ರ ಫೈನಲ್ನಲ್ಲಿ ಈ ಎರಡು ತಂಡಗಳೇ ಮುಖಾಮುಖಿ ಆದವು. ಆದರೆ ಈ ಬಾರಿ ಕಿರನ್ ಪೊಲಾರ್ಡ್ ನಾಯಕತ್ವದ ನ್ಯೂಯಾರ್ಕ್ ತಂಡ ಗೆದ್ದು ಬೀಗಿತು. ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡಕ್ಕೆ ಇದು ಎರಡನೇ ಆವೃತ್ತಿಯಾಗಿದೆ. ಕಳೆದ ಬಾರಿ ಫೈನಲ್ಸ್ ಪ್ರವೇಶಿಸಿ ರನ್ರ್ ಅಪ್ ಆಗಿದ್ದ ಪಡೆ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದೆ.\
ಇಲ್ಲಿನ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 4 ಬಾಲ್ ಮತ್ತು 7 ವಿಕೆಟ್ ಉಳಿಸಿಕೊಂಡು ನ್ಯೂಯಾರ್ಕ್ ಸ್ಟ್ರೈಕರ್ಸ್ ಜಯ ದಾಖಲಿಸಿತು. 2022ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಡೆಕ್ಕನ್ ಗ್ಲಾಡಿಯೇಟರ್ಸ್ ಅನ್ನು ಮಣಿಸಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಅಬುಧಾಬಿ ಟಿ 10 ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಡೆಕ್ಕನ್ ಗ್ಲಾಡಿಯೇಟರ್ಸ್ನ ಹ್ಯಾಟ್ರಿಕ್ ಜಯದ ಆಸೆಯನ್ನು ಭಗ್ನ ಮಾಡಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಅಬುಧಾಬಿ ಟಿ 10 ಟ್ರೋಫಿಯನ್ನು ಗೆದ್ದುಕೊಂಡಿದೆ.
ಈ ಗುರಿಯನ್ನು ಬೆನ್ನತ್ತಿದ್ದ ನ್ಯೂಯಾರ್ಕ್ ತಂಡ ಆರಂಭಿಕ ಮೂರು ವಿಕೆಟ್ನ್ನು ಬೇಗ ಕಳೆದುಕೊಂಡಿತು. ಅದರೆ ಪವರ್ ಹಿಟ್ಟಿಂಗ್ ಕೌಶಲ್ಯಕ್ಕೆ ಹೆಸರಾದ ಪಾಕಿಸ್ತಾನದ ಆಸಿಫ್ ಅಲಿ ಮತ್ತು ನಾಯಕ ಕೀರಾನ್ ಪೊಲಾರ್ಡ್ ನಾಲ್ಕನೇ ವಿಕೆಟ್ಗೆ 29 ಎಸೆತಗಳಲ್ಲಿ ಅಜೇಯ 56 ರನ್ ಜೊತೆಯಾಟ ನಡೆಸಿದರು. ಅಲಿ 25 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 48 ರನ್ ಗಳಿಸಿ ಅಜೇಯರಾಗಿ ಉಳಿದರು, ಪೊಲಾರ್ಡ್ 13 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅಜೇಯ 21 ರನ್ ಗಳಿಸಿ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಅಂತಿಮ ಪಂದ್ಯವನ್ನು ಗೆದ್ದರು.
ಟ್ರೋಫಿ ಗೆದ್ದ ಸ್ಟ್ರೈಕರ್ ತಂಡ 1 ಲಕ್ಷ ಡಾಲರ್ ಬಹುಮಾನದ ಹಣ ಪಡೆದರೆ, ಹಿಂದಿನ ಎರಡು ಆವೃತ್ತಿಗಳನ್ನು ಗೆದ್ದು ಹ್ಯಾಟ್ರಿಕ್ ಪ್ರಶಸ್ತಿ ಜಯಗಳಿಸುವ ನಿರೀಕ್ಷೆಯಲ್ಲಿದ್ದ ಗ್ಲಾಡಿಯೇಟರ್ಸ್ ರನ್ನರ್-ಅಪ್ ಆಗಿ 50,000 ಬಹುಮಾನ ಮೊತ್ತವನ್ನು ಸ್ವೀಕರಿಸಿತು. ಮುಹಮ್ಮದ್ ಜವಾದುಲ್ಲಾ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರೆ, ಆಸಿಫ್ ಅಲಿ ಪಂದ್ಯ ಶ್ರೇಷ್ಠರಾಗಿ ಹೊರಹೊಮ್ಮಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್ ಸುನಿಲ್ ನರೈನ್ ದಾಳಿಯ ವಿರುದ್ಧ ಅಬ್ಬರಿಸುವಲ್ಲಿ ವಿಫಲರಾದರು. ಎರಡು ಓವರ್ ಮಾಡಿದ ನರೈನ್ ಕೇವಲ 6 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು. ಇದರಿಂದ ಕಠಿಣ ಸವಾಲಿನ ಮೊತ್ತವನ್ನು ಕಲೆಹಾಕಲು ಡೆಕ್ಕನ್ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಆಂಡ್ರೆ ರಸೆಲ್ 30 ಮತ್ತು ಡೇವಿಡ್ ವೀಸ್ 20 ರನ್ಗಳ ಇನ್ನಿಂಗ್ಸ್ ಬಲದಿಂದ ಡೆಕ್ಕನ್ ತಂಡ 5 ವಿಕೆಟ್ ಕಳೆದುಕೊಂಡು 91 ರನ್ಗಳ ಗುರಿ ನೀಡುವಲ್ಲಿ ಸಹಕಾರಿ ಆಯಿತು.