ಉಡುಪಿ: ಪುರಭವನದಲ್ಲಿ ಬುಧವಾರ ನಡೆದ ಜಿಲ್ಲೆಯ ಎಲ್ಲ ಹೊಟೇಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ ಮಾಲಕರ ಸಭೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ| ಹರ್ಷ ಪ್ರಿಯಂವದ ಅವರು ಹೊಸ ವರ್ಷಾಚರಣೆ ವೇಳೆ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು ಹಾಗೂ ಪಾಲಿಸಬೇಕಾದ ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಸಂದರ್ಭ ರಾತ್ರಿ 10ರ ರೊಳಗೆ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸಿ, ನಿಗದಿತ ಸಮಯದೊಳಗೆ ಎಲ್ಲ ಕಾರ್ಯಕ್ರಮಗಳನ್ನು ಮುಕ್ತಾಯ ಗೊಳಿಸಬೇಕು. ಅಬ್ಬರದ ಸಂಗೀತ, ಫೈರ್‌ಕ್ಯಾಂಪ್‌ಗ್ಳಿಂದ ನೆರೆಹೊರೆಯವರ ಶಾಂತಿಗೆ ಧಕ್ಕೆಯಾಗಬಾರದು ಎಂದು ತಿಳಿಸಿದರು.
ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ವಾಸಿಸುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಿರ್ಜನ ಪ್ರದೇಶ, ಹೊರವಲಯ ಅಥವಾ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುನ್ನ ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡಿ ಪೂರ್ವಾನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಇಂತಹ ಪ್ರದೇಶಗಳಿಗೆ ಕರೆದೊಯ್ದು ದುರ್ಘಟನೆಗಳು ಸಂಭವಿಸಿದರೆ ಹೋಂಸ್ಟೇ ಮಾಲಕರೇ ಹೊಣೆಗಾರರಾಗಲಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದರು.ವಿದೇಶಿ ಅತಿಥಿಗಳು ಆಗಮಿಸಿದಲ್ಲಿ ಅವರ “ಸಿ’ ಫಾರಂ ವಿವರಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ವಿದೇಶಿ ವಿಭಾಗಕ್ಕೆ ಸಲ್ಲಿಸಿ, ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡಬೇಕಾಗಿದೆ. ಎಲ್ಲ ಅತಿಥಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ ಹಾಗೂ ಗುರುತಿನ ಚೀಟಿಗಳ ವಿವರಗಳನ್ನು ದಾಖಲಿಸಬೇಕು ಎಂದರು.
ವಿದೇಶಿಗರು ಕೆಲಸ ಅಥವಾ ಇತರ ಕಾರಣಗಳಿಗೆ ಬಂದರೆ ಮಾಹಿತಿ ನೀಡಬೇಕು. ಮದ್ಯಪಾನ ವಿತರಿಸಲು ಅಬಕಾರಿ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಯಾವುದೇ ಮಾದಕ ವಸ್ತುಗಳ ಸೇವನೆಗೆ ಅವಕಾಶ ನೀಡಬಾರದು. ನಿಯಮ ಉಲ್ಲಂಘನೆಯಾದಲ್ಲಿ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ ಪಿಎಸ್‌ಐ ಹರೀಶ್ ಉಪಸ್ಥಿತರಿದ್ದರು.

















