‘ಟಾಕ್ಸಿಕ್’ ಹೊಸ ಪೋಸ್ಟರ್ ರಿಲೀಸ್, ರಕ್ತಸಿಕ್ತ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್,ರಿಲೀಸ್ ಗೆ ಒಂದು ತಿಂಗಳು ಇರುವಾಗಲೇ ಬಂತು ಥ್ರಿಲ್ಲಿಂಗ್ ಪೋಸ್ಟರ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿದೆ. ಚಿತ್ರ ಬಿಡುಗಡೆಯಾಗಲು ಕೇವಲ ಒಂದು ತಿಂಗಳು ಬಾಕಿ ಇರುವ ಸಂದರ್ಭದಲ್ಲಿ, ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಯಶ್ ಅವರ ಸ್ಟೈಲಿಷ್ ಹಾಗೂ ರಕ್ತಸಿಕ್ತ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

‘Begins with a Bang’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ಹೊಸ ಪೋಸ್ಟರ್‌ನಲ್ಲಿ ಯಶ್ ಅವರ ಕೈಗಳಲ್ಲಿ ರಕ್ತ ಮೆತ್ತಿಕೊಂಡಿದ್ದು, ಕೈಯಲ್ಲಿ ಸಿಗರೇಟ್ ಹಿಡಿದಿರುವ ವಿಭಿನ್ನ ಗೆಟಪ್ ಕುತೂಹಲ ಹೆಚ್ಚಿಸಿದೆ. ಪೋಸ್ಟರ್‌ನಲ್ಲಿರುವ ದೃಶ್ಯ, ಚಿತ್ರದ ಕಥೆಯ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಇಲ್ಲಿವರೆಗೂ ಬಿಡುಗಡೆಯಾಗಿದ್ದ ಪೋಸ್ಟರ್‌ಗಳಿಗಿಂತ ಈ ಹೊಸ ಲುಕ್ ಸಂಪೂರ್ಣ ಭಿನ್ನವಾಗಿದ್ದು, ಯಶ್ ಅವರನ್ನು ಮತ್ತಷ್ಟು ಸ್ಟೈಲಿಷ್ ಮತ್ತು ತೀವ್ರತೆಯ ಪಾತ್ರದಲ್ಲಿ ಪರಿಚಯಿಸಿದೆ. ರಕ್ತಸಿಕ್ತ ಕೈಗಳು ಮತ್ತು ಗಂಭೀರ ಅಭಿವ್ಯಕ್ತಿ ಚಿತ್ರದ ಆಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೂಚಿಸುವಂತಿವೆ.

ಜುಲೈ 26ರಂದು ಬಿಡುಗಡೆಯಾದ ಈ ಪೋಸ್ಟರ್ ಮೂಲಕ ಚಿತ್ರತಂಡ ಪ್ರಚಾರಕ್ಕೆ ಹೊಸ ಚಾಲನೆ ನೀಡಿದೆ. ಆಗಸ್ಟ್ 26ರಂದು ವಿಶ್ವದಾದ್ಯಂತ ‘ಟಾಕ್ಸಿಕ್’ ಚಿತ್ರ ಭರ್ಜರಿಯಾಗಿ ಬಿಡುಗಡೆಯಾಗಲಿದೆ.

ಚಿತ್ರವನ್ನು ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಿಸಲಾಗಿದ್ದು, ಬಳಿಕ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಯಶ್ ಅಭಿನಯದ ಈ ಪ್ಯಾನ್-ವಿಶ್ವ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಾವ ಮಟ್ಟಿನ ದಾಖಲೆ ನಿರ್ಮಿಸಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.