ಬೆಂಗಳೂರು: ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಯುಪಿಐನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ಆಗಸ್ಟ್ 1 ರಿಂದ ಬಳಕೆದಾರರಿಗೆ ಅನ್ವಯವಾಗಲಿದೆ.
ದಿನನಿತ್ಯ ಮಾಡುವ ಸಣ್ಣ ಪ್ರಮಾಣದ ಪಾವತಿಯ ಮೇಲೆ ಯಾವುದೇ ಪರಿಣಾಮ ಬೀರದು ಎಂದಿರುವ ನಿಗಮ, ಕೆಲವು ಮಿತಿಗಳು, ಹಣ ಪಾವತಿಯ ಸಮಯಗಳಲ್ಲಿ ಬದಲಾವಣೆ ತಂದಿದೆ.
ಅವುಗಳೆಂದರೆ…
ಹೊಸ ನಿಯಮದ ಪ್ರಕಾರ, ಒಂದು ದಿನದಲ್ಲಿ ಬಳಕೆದಾರರು 50 ಬಾರಿ ಮಾತ್ರ ಯುಪಿಐ ಅಪ್ಲಿಕೇಷನ್ ಮೂಲಕ ಖಾತೆಯಲ್ಲಿರುವ ಬಾಕಿ ಹಣವನ್ನು ಪರಿಶೀಲಿಸಬಹುದು.
ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬಳಕೆದಾರರು ದಿನಕ್ಕೆ 25 ಬಾರಿ ಮಾತ್ರ ಪಡೆಯಬಹುದು.
ನೆಟ್‌ಫ್ಲಿಕ್ಸ್, ಸ್ಪಾಟಿಪೈ, ಮ್ಯುಚುವಲ್ ಫಂಡ್ಸ್ ಹೀಗೆ ಹಲವು ರೀತಿಯ ಪೇಮೆಂಟ್‌ಗಳನ್ನು ಆಟೋ ಮೋಡ್‌ನಲ್ಲಿ ಇಟ್ಟಿರುತ್ತೇವೆ. ಅಂದರೆ ತಿಂಗಳಾಂತ್ಯಕ್ಕೆ ಅಥವಾ ಅವಧಿ ಮುಗಿದ ಮೇಲೆ ಖಾತೆಯಿಂದ ಅದಾಗಿಯೇ ಹಣ ಪಾವತಿಯಾಗುತ್ತದೆ. ಈ ಪ್ರಕ್ರಿಯೆ ಆ.1ರಿಂದ ಕೇವಲ ಹಣ ಪಾವತಿಯ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಪಾವತಿಯಾಗಲಿದೆ. ಅಂದರೆ ಬೆಳಿಗ್ಗೆ 10ರ ಒಳಗೆ, ಮಧ್ಯಾಹ್ನ 1–5ರವರೆಗೆ ಹಾಗೂ ರಾತ್ರಿ 9.30ರ ನಂತರ ಪಾವತಿಯಾಗಲಿದೆ.
ಹಣ ಪಾವತಿಸುವಾಗ ಒಂದು ವೇಳೆ ವಹಿವಾಟು ಬಾಕಿಯಾದರೆ, ಬಳಕೆದಾರರಿಗೆ ಅದರ ಸ್ಥಿತಿಯನ್ನು ಮೂರು ಬಾರಿ ಮಾತ್ರ ಪರಿಶೀಲಿಸಲು ಅನುಮತಿಸಲಾಗುತ್ತದೆ, ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡುಗಳ ಅಂತರವಿರುತ್ತದೆ.












