ನವದೆಹಲಿ: ಸೆಪ್ಟೆಂಬರ್ 07; ಉದ್ಯೋಗಿಗಳಿಗೆ ರಜೆಯ ವಿಚಾರದಲ್ಲಿ ನೆರವಾಗುವ ಹೊಸ ಕಾನೂನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಕ್ಯಾಲೆಂಡರ್ ವರ್ಷದಲ್ಲಿ 30ಕ್ಕಿಂತ ಹೆಚ್ಚು ಗಳಿಕೆ ರಜೆ ಇದ್ದರೆ ಕಂಪನಿಗಳು ಹೆಚ್ಚುವರಿ ವೇತನ ಪಾವತಿ ಮಾಡಬೇಕು ಎಂದು ನಿಯಮ ಹೇಳುತ್ತದೆ.
ಶೀಘ್ರವೇ ಬರಲಿರುವ ಹೊಸ ಕಾನೂನು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಿದೆ. ಟೇಕ್ ಹೋಮ್ ವೇತನ ಮತ್ತು ಇಪಿಎಫ್ ಖಾತೆಗಳಿಗೆ ಸಹ ಹೆಚ್ಚಿನ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಅಧಿಸೂಚನೆ ಪ್ರಕಟಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.ಈ ಕುರಿತ ಅಧಿಸೂಚನೆ ಶೀಘ್ರವೇ ಪ್ರಕಟವಾಗುವ ನಿರೀಕ್ಷೆ ಇದೆ.
ವಾರ್ಷಿಕ ರಜೆ, ರಜೆಗಳನ್ನು ಮುಂದಿನ ವರ್ಷಕ್ಕೆ ಮುಂದುವರೆಸುವುದು ಮತ್ತು ಕಂಪನಿ ಹಣ ಪಾವತಿ ಮಾಡುವುದರಲ್ಲಿ ಹಲವು ಬದಲಾವಣೆಯಾಗಲಿದೆ. ಉದ್ಯೋಗಿಯ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಎಷ್ಟು ರಜೆ ಉಳಿಯುತ್ತದೆ? ಎಂಬ ಹೊಸ ಲೆಕ್ಕಾಚಾರವೂ ನಿಯಮಗಳ ಪ್ರಕಾರ ಆರಂಭವಾಗಲಿದೆ.ಹೊಸ ನಿಯಮದ ಪ್ರಕಾರ ಕ್ಯಾಲೆಂಡರ್ ವರ್ಷದಲ್ಲಿ ನೌಕರನ ಗಳಿಕೆ ರಜೆ 30ಕ್ಕಿಂತ ಹೆಚ್ಚು ಬಾಕಿ ಇದ್ದರೆ ಹೆಚ್ಚುವರಿಯಾಗಿ ಉಳಿಸಿಕೊಂಡ ರಜೆಗೆ ಕಂಪನಿ ವೇತನ ಪಾವತಿ ಮಾಡಬೇಕಾಗುತ್ತದೆ. ಆದರೆ ಈ ನಿಯಮ ಯಾವ ಮಟ್ಟದ ನೌಕರರಿಗೆ ಅನ್ವಯವಾಗಲಿದೆ? ಎಂಬುದು ಇನ್ನೂ ತಿಳಿದಿಲ್ಲ.
ವಾರ್ಷಿಕ ಕ್ಯಾಲೆಂಡರ್ ಪ್ರಕಾರ 30ಕ್ಕಿಂತ ಹೆಚ್ಚು ಗಳಿಕೆ ರಜೆ ಇದ್ದರೆ ಕಂಪನಿಗಳು ಹೆಚ್ಚುವರಿ ವೇತನ ಪಾವತಿ ಮಾಡಬೇಕು ಎಂಬ ನಿಯಮ ಈ ಕಾನೂನಿನಲ್ಲಿ ಇದೆ. ಆದರೆ ಕಂಪನಿಗಳು ಮೂಲ ವೇತನದ ಮೇಲೆ ಹೆಚ್ಚುವರಿ ವೇತನ ನೀಡಬೇಕೋ?, ಅಥವ ಭತ್ಯೆಗಳನ್ನು ಸೇರಿಸಿ ವೇತನ ನೀಡಲಾಗುತ್ತದೆಯೋ? ಎಂಬುದು ಇನ್ನೂ ತಿಳಿದು ಬರಬೇಕಿದೆ.
ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಪ್ರಸ್ತುತ ಇದೇ ಮಾದರಿ ಕಾನೂನು ಜಾರಿಯಲ್ಲಿದೆ. ಅವುಗಳಲ್ಲಿಯೇ ಕೆಲವು ಬದಲಾವಣೆ ಮಾಡಿ ಹೊಸ ಕಾರ್ಮಿಕ ಕಾನೂನು ರೂಪಿಸಲಾಗಿದೆ. ಇದು ಕಂಪನಿ, ಉದ್ಯೋಗಿಗಳಿಗೆ ಸಹ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.4 ಮಸೂದೆ ಅಂಗೀಕಾರ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಮಾಡುವ ವಾತಾವರಣಕ್ಕೆ ಒತ್ತು ನೀಡುವ ಹೊಸ ನಾಲ್ಕು ಮಸೂದೆಯನ್ನು ಸಂಸತ್‌ನಲ್ಲಿ ಅಂಗೀಕಾರ ಮಾಡಲಾಗಿದೆ. ರಾಷ್ಟ್ರಪತಿಗಳ ಸಹಿಯ ಬಳಿಕ ಈ ಕುರಿತು ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುತ್ತದೆ.
ಸರ್ಕಾರಿ ನೌಕರರ ಗಳಿಕೆ ರಜೆಯ ಕುರಿತು ರಾಜ್ಯ ಸರ್ಕಾರಗಳು ಹಲವಾರು ಸ್ಪಷ್ಟವಾದ ನಿಯಮಗಳನ್ನು ರೂಪಿಸಿವೆ. ಆದರೆ ಖಾಸಗಿ ವಲಯದ ಉದ್ಯೋಗಿಗಳು ಹೆಚ್ಚಿನ ರಜೆ ಇದ್ದರೆ ನಷ್ಟವನ್ನು ಅನುಭವಿಸಬೇಕಿತ್ತು. ಹೊಸ ನೀತಿ ಜಾರಿಗೆ ಬಂದರೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ (ಓಎಸ್‌ಎಚ್) ಕ್ಷೇತ್ರದಲ್ಲಿನ ಬದಲಾವಣೆಗಾಗಿ ಹೊಸ ಕಾನೂನು ಜಾರಿಗೆ ತರಲಿದೆ. ಉದ್ಯೋಗಿಗಳ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಪಡೆಯದೇ ಬಾಕಿ ಉಳಿಯುವ ರಜೆಗಳು ಹಾಗೆಯೇ ನಷ್ಟವಾಗುವುದನ್ನು ಹೊಸ ಕಾನೂನು ತಡೆಯಲಿದೆ.












