ಕಾರ್ಕಳ ಮಂಜುನಾಥ ಪೈ ಕಾಲೇಜಿನಲ್ಲಿ ನೂತನ ಲ್ಯಾಬ್ ಉದ್ಘಾಟನೆ- ಕಂಪ್ಯೂಟರ್ ಹಸ್ತಾಂತರ

ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಔದ್ಯೋಗಿಕ ಉನ್ನತಿಗೆ ವಿವಿಧ ಕೌಶಲ್ಯದೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್, ರೊ. ರಾಜಾರಾಮ್ ಭಟ್ ಹೇಳಿದರು.

ಅವರು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ, ಕಾಗ್ನಿಝೆಂಟ್ ಕಂಪನಿ ಹಾಗೂ ರೋಟರಿ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಯಾದ ‘ಹೆಲ್ಪ್ ಎಡ್ಯುಕೇಟ್’ ಕಾರ್ಯಕ್ರಮದಡಿಯಲ್ಲಿ ಕಾಲೇಜಿಗೆ ಕಾಗ್ನಿಝೆಂಟ್ ರವರು ಉಚಿತವಾಗಿ ನೀಡಿದ 20 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ರಾಜ್ಯಾದ್ಯಂತ ಉಚಿತ ಕಂಪ್ಯೂಟರ್ ಗಳನ್ನು ಸರಬರಾಜು ಮಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ರೊಟರಿ ಸಂಸ್ಥೆಯ ರೊ. ಸುಭ್ರಹ್ಮಣ್ಯ ಬಾಯರಿಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆಗಳು ನೀಡುತ್ತಿರುವ ಸಹಾಯ ಹಾಗೂ ಸಹಕಾರದ ಕುರಿತು ಮಾತನಾಡಿದರು. ಇನ್ನೋರ್ವ ಅತಿಥಿ ರೋಟರಿ ಕ್ಲಬ್ ಉಡುಪಿ ಯ ರೊ. ಲಕ್ಷ್ಮೀನಾರಾಯಣ ರವರು ತಾಂತ್ರಿಕ ಸಲಹೆ ಸೂಚನೆಗಳನ್ನು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಎಂ. ಅವರು, ಕಾಲೇಜಿಗೆ ಕಂಪ್ಯೂಟರ್ ಗಳನ್ನು ಉಚಿತವಾಗಿ ನೀಡಿದ ಕಾಗ್ನಿಝೆಂಟ್ ಕಂಪನಿ ಹಾಗೂ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ರೋಟರಿ ಸಂಸ್ಥೆಗಳಿಗೂ ಅಭಿನಂದಿಸಿದರು.

ಕಾಲೇಜಿನ ಐಟಿ ಸಂಚಾಲಕರಾದ ವೆಂಕಟೇಶ್ ಸ್ವಾಗತಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಹಾಗೂ ಐಕ್ಯುಎಸಿ ಸಂಚಾಲಕರಾದ ಜ್ಯೋತಿ ಎಲ್ ಜನ್ನೆ ವಂದಿಸಿದರು. ಸ್ನಾತಕೊತ್ತರ ವಿಭಾಗದ ಸಂಯೋಜಕರಾದ ವಿದ್ಯಾಧರ ಹೆಗ್ಡೆ  ಉಪಸ್ಥಿತರಿದ್ದರು. ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನ್ವಿತಾ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.