ನವದೆಹಲಿ: ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ ಪೇಮೆಂಟ್ ಗಳನ್ನು ಮತ್ತಷ್ಟು ಸುರಕ್ಷಿತಗೊಳಿಸುವುದಕ್ಕಾಗಿ ಆರ್ ಬಿಐ ಹೊಸ ಮಾರ್ಗಸೂಚಿಗಳನ್ನು ನೀಡಿದ್ದು, ಅ.1 ರಿಂದ ಇವುಗಳು ಜಾರಿಗೆ ಬರಲಿವೆ.
ಗ್ರಾಹಕರೇ ಕೇಳದ ಹೊರತು ಕಾರ್ಡ್ ಗಳಿಗೆ ಅಂತಾರಾಷ್ಟ್ರೀಯ ಸೌಲಭ್ಯವನ್ನು ಕಲ್ಪಿಸುವಂತಿಲ್ಲ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರಿಗೆ ತಮಗೆ ಯಾವೆಲ್ಲಾ ಸೇವೆಗಳು ಬೇಕು-ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಅವಕಾಶ ಇರಲಿದೆ.
ಖರ್ಚು ಮಿತಿ, ಆನ್ ಲೈನ್ ವಹಿವಾಟು, ಅಂತಾರಾಷ್ಟ್ರೀಯ ವಹಿವಾಟು ಹಾಗೂ ಕಾಂಟಾಕ್ಟ್ ಲೆಸ್ ( ವೈಫೈ ಮೂಲಕ ಪಿನ್ ಇಲ್ಲದೇ ಪಾವತಿಸುವ ವಿಧಾನ) ಗಳನ್ನು ನಿರ್ಧರಿಸಿ, ಮಿತಿ ಹಾಕಿಕೊಳ್ಳುವ ಆಯ್ಕೆಯೂ ಗ್ರಾಹಕರಿಗೇ ನೀಡಲಾಗುತ್ತದೆ.
ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ವಹಿವಾಟುಗಳನ್ನು ಪ್ರಾಥಮಿಕವಾಗಿ ಎಟಿಎಂ ಗಳಲ್ಲಿ ಹಾಗೂ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಗಳಲ್ಲಿನ ಬಳಕೆಗೆ ಸಕ್ರಿಯಗೊಳಿಸಲಾಗುತ್ತದೆ. ಹೊಸ ನಿಯಮಗಳ ಪ್ರಕರ ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಂದಿರುವವರು ವಹಿವಾಟು ಮಿತಿಯನ್ನು ವಿಧಿಸಿಕೊಳ್ಳಬಹುದಾಗಿದೆ.
ಇನ್ನು ಮುಂದೆ ಎನ್ ಎಫ್ ಸಿಯನ್ನು ಸಕ್ರಿಯ, ನಿಶ್ಕ್ರಿಯಗೊಳಿಸುವ ಆಯ್ಕೆ ಗ್ರಾಹರದ್ದೇ ಆಗಿರುತ್ತದೆ. ಗ್ರಾಹಕರು ಮೊಬೈಲ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಲಾಗ್ ಇನ್ ಆಗಿ ಕಾರ್ಡ್ ವಿಭಾಗದಲ್ಲಿ ಮ್ಯಾನೇಜ್ ಕಾರ್ಡ್ ನ್ನು ಆಯ್ಕೆ ಮಾಡುವ ಮೂಲಕ ಈ ಬದಲಾವಣೆಗಳನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಮಾಡಿಕೊಳ್ಳಬಹುದಾಗಿದೆ.