ಹೊಸ ಸರ್ಕಾರ ಯಾವುದೇ ತನಿಖೆ ಮಾಡಬಹುದು, ಎದುರಿಸಲು ನಾವು ಸಿದ್ದ: ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಹೊಸ ಸರ್ಕಾರ ಯಾವುದೇ ತನಿಖೆ ನಡೆಸಲಿ. ಎದುರಿಸಲು ನಾವು ಸಿದ್ದ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಇಂದು ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಲ್ಲಿ ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಎಂದು ಸರ್ಕಾರ ತನಿಖೆಗೆ ಆದೇಶಿಸಿರುವುದಕ್ಕೆ ಮಾಧ್ಯಮಗಳ ಪ್ರಶ್ನಗೆ ಉತ್ತರಿಸಿದ ಅವರು ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಇರಲಿ. ಯಾವುದೇ ತನಿಖೆ ಮಾಡಬಹುದು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ. ನಾನೇ ಹಿಂದೆ ದೂರು ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆ ಎಫ್ಐಆರ್ ಆಗಿರಲಿಲ್ಲ ಎಂದರು.

ಹೊಸ ಸರ್ಕಾರ ಬಂದಿದೆ ಯಾವುದೇ ರೀತಿ ತನಿಖೆ ನಡೆಸಲಿ. ಎದುರಿಸಲು ನಾವು ಸಿದ್ದ. ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು. ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು ಎಂದರು.

ಪಠ್ಯ ಪುಸ್ತಕ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ವಿಚಾರಗಳ ಆಧಾರದ ಮೇಲೆ ಕೆಲವು ಹೊಸದಾಗಿ ಪಠ್ಯಗಳನ್ನು ಪರಿಚಯ ಮಾಡಿದ್ದೆವು. ಅವರು ಅದೇ ಜಾಡನ್ನು ಹಿಡಿದು ಹೊಸ ಸಮಿತಿ ಮಾಡಲು ಹೊರಟಿದ್ದಾರೆ. ಇದಕ್ಕೆ ಸಮಾಜವೇ ಪ್ರತಿಕ್ರಿಯೆ ನೀಡಲಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಪೋಷಕರು ಗಮನಿಸುತ್ತಿದ್ದಾರೆ. ಪಠ್ಯ ಪದೇ ಪದೇ ಬದಲಾವಣೆಯಿಂದ ಮಕ್ಕಳಿಗೆ ಸಮಸ್ಯೆ ಆಗಬಾರದು. ಜವಾಬ್ದಾರಿಯುತ ಸರ್ಕಾರ ಏನು ಮಾಡಲಿದೆ ನೋಡೋಣ ಎಂದರು.

ಎನ್.ಇ.ಪಿ ಮೂಲಕ ಈಗ ಮಕ್ಕಳು ಅಧ್ಯಯನ ಶುರು ಮಾಡಿದ್ದಾರೆ. ಎನ್.ಇ.ಪಿ ಮಾಡುವಾಗಲೇ ಸಮಿತಿ ಮಾಡಿ, ರಾಜ್ಯದ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ. ಎಲ್ಲಾ ತಜ್ಞರ ಅಭಿಪ್ರಾಯ ಪಡೆದು ಎನ್.ಇ.ಪಿ ಜಾರಿಗೆ ತರಲಾಗಿದೆ ಎಂದರು.

ಉಚಿತ ಯೋಜನೆಗಳ ಬಗ್ಗೆ ನಿನ್ನೆ ಸಿಎಂ ಸಭೆ ಮಾಡಿದ್ದಾರೆ. ಸುಧೀರ್ಘ ಸಭೆಯಲ್ಲಿ ಏನಾಗಿದೆ ಗೊತ್ತಿಲ್ಲ. ಎಲ್ಲಾ ಉಚಿತ ನೀಡಿದರೆ, ಅಭಿವೃದ್ಧಿ ಕಾರ್ಯ ಕುಂಟಿತ ಆಗಲಿದೆ. ಎಲ್ಲರಿಗೂ ಸಿಗುತ್ತದೆ ಅಂತ ಮೊದಲು ಆಶ್ವಾಸನೆ ನೀಡಿದ್ದಾರೆ. ಅತ್ತೆಗೋ, ಸೊಸೆ ಗೋ ಅಂತ ಮೊದಲು ಹೇಳಿರಲಿಲ್ಲ. ಏನು ಮಾಡಲಿದ್ದಾರೆ ಅಂತ ಕರ್ನಾಟಕದ ಜನತೆಗೆ ಕಾಡುತ್ತಿದೆ.

ಒಂದನೇ ತಾರೀಖು ಕ್ಯಾಬಿನೆಟ್ ಇದೆ. ಅಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಆರ್ಥಿಕವಾಗಿ ಕಷ್ಟ ಅನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜನರನ್ನು ಯಾಮಾರಿಸಿ ಗೆಲ್ಲಬೇಕು ಅಂತ ಮಾಡಿದ್ದಾರೆ. ಜನ ಈಗ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡುತ್ತಾರೆ ಕಾದು ನೋಡೋಣ ಎಂದರು.

ಫ್ರೀ ಯೋಜನೆ ಘೋಷಣೆ ಜಾರಿ ಮಾಡದೆ ಇದ್ದರೆ ಕೆಲವರು ಕಾನೂನು ಹೋರಾಟ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದವರೇ ಈ ರೀತಿ ಹೋರಾಟ ಮಾಡೋದಕ್ಕೆ ಹೇಳಿ, ಕೋರ್ಟ್ ನಲ್ಲಿ ಫ್ರೀ ಯೋಜನೆಗೆ ತಡೆ ತರುವ ತಂತ್ರ ಇದ್ದರೂ ಇರಬಹುದು. ಹೇಳಲಿಕ್ಕೆ ಆಗುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.