ನೈಜ ಗುರುತನ್ನು ಮರೆಮಾಚಿ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಸ್ಥಾಪಿಸುವುದು ಅಪರಾಧ: ಅಮಿತ್ ಶಾ

ನವದೆಹಲಿ: ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ನವೀಕರಿಸಲು ಗೃಹ ಸಚಿವ ಅಮಿತ್ ಶಾ ಶುಕ್ರವಾರದಂದು 3 ಹೊಸ ಮಸೂದೆಗಳನ್ನು ಮಂಡಿಸಿದರು. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುತ್ತವೆ.

ಹೊಸ ಮಸೂದೆಯಲ್ಲಿ ಮಹತ್ವದ ನಿಬಂಧನೆಯನ್ನು ಗೃಹ ಸಚಿವರು ಘೋಷಿಸಿದರು. ಹೊಸ ಕಾನೂನಿನಲ್ಲಿ ಹೊಸ ಅಪರಾಧವನ್ನು ಪರಿಚಯಿಸಲಾಗಿದ್ದು ಇದರ ಅಡಿಯಲ್ಲಿ, ಪುರುಷರು ತಮ್ಮ ‘ನೈಜ ಗುರುತ’ನ್ನು ಮರೆಮಾಡಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯನ್ನು ಸ್ಥಾಪಿಸುವುದು ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಅಂದರೆ ಮಹಿಳೆಯ ಜೊತೆ ದೈಹಿಕ ಸಂಪರ್ಕ ಹೊಂದಲು ತಮ್ಮ ನೈಜ ಗುರುತನ್ನು ಮರೆಮಾಚಿ ಕಪಟದಿಂದ ಆಕೆಯನ್ನು ವಂಚಿಸಿದಲ್ಲಿ ಇನ್ನು ಮುಂದೆ ಅದು ಅಪರಾಧದ ಪರಿಧಿಯಲ್ಲಿ ಬರುತ್ತದೆ.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಿಗೆ ಆದ್ಯತೆ ನೀಡಲಾಗಿದೆ.

ಮದುವೆ, ಉದ್ಯೋಗ, ಬಡ್ತಿ ಅಥವಾ ತಪ್ಪು ಗುರುತನ್ನು ವ್ಯಕ್ತಪಡಿಸುವ ಮೂಲಕ, ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಯಾರೊಂದಿಗಾದರೂ ಲೈಂಗಿಕ ಸಂಬಂಧವನ್ನು ಸ್ಥಾಪಿಸುವ ಕ್ರಮವನ್ನು ನರೇಂದ್ರ ಮೋದಿ ಸರ್ಕಾರವು ಮೊದಲ ಬಾರಿಗೆ ಕ್ರಿಮಿನಲ್ ಅಪರಾಧವನ್ನಾಗಿ ಮಾಡಿದೆ ಎಂದು ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದರು.

ಮದುವೆಯ ಭರವಸೆಯಲ್ಲಿ ಲೈಂಗಿಕ ಸಂಬಂಧಗಳನ್ನು ಸ್ಥಾಪಿಸುವುದು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಶಿಕ್ಷಾರ್ಹವಾಗಿದ್ದರೂ, ಗುರುತನ್ನು ಮರೆಮಾಡುವುದು ಸೇರಿದಂತೆ ವಂಚನೆಯ ಮೂಲಕ ಲೈಂಗಿಕತೆಯ ಇತರ ಘಟನೆಗಳಿಗೆ ಅಂತಹ ಸ್ಪಷ್ಟವಾದ ನಿಬಂಧನೆಗಳು ಇರಲಿಲ್ಲ. ಹಾಗಾಗಿ ಬಹುತೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತಿದ್ದವು ಮತ್ತು ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿರಲಿಲ್ಲ. ಈಗ, ಹೊಸ ಕಾನೂನು ಅವುಗಳನ್ನು ಅಪರಾಧಗಳೆಂದು ಸ್ಪಷ್ಟವಾಗಿ ಉಲ್ಲೇಖಿಸುವುದರಿಂದ, ಶಿಕ್ಷೆ ಪ್ರಮಾಣ ಹೆಚ್ಚಾಗುತ್ತವೆ.

ಸಾಮೂಹಿಕ ಅತ್ಯಾಚಾರದ ಎಲ್ಲ ಸದಸ್ಯರಿಗೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಇದಲ್ಲದೆ, ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಮತ್ತು ಗುಂಪು ಹತ್ಯೆ ಪ್ರಕರಣಗಳಿಗೆ ಹೊಸ ನಿಬಂಧನೆಗಳನ್ನು ಪರಿಚಯಿಸಲಾಗಿದೆ.